ಗ್ರಾಪಂಗಳಲ್ಲಿ ಮಕ್ಕಳ ಗ್ರಾಮಸಭೆ ಕಡ್ಡಾಯ: ಡಾ.ತಿಪ್ಪೇಸ್ವಾಮಿ

KannadaprabhaNewsNetwork |  
Published : Aug 21, 2025, 02:00 AM IST
ಪೊಟೋ೨೦ಎಸ್.ಆರ್.ಎಸ್೧ (ನಗರದ ಆಡಳಿತ ಸೌಧದಲ್ಲಿ ಶಿರಸಿ ತಾಲೂಕಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ.ಕೆ.ಟಿ ಮಾತನಾಡಿದರು.) | Kannada Prabha

ಸಾರಾಂಶ

ಪ್ರತಿ ಸರ್ಕಾರಿ ಇಲಾಖೆಯಲ್ಲಿಯೂ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆಯನ್ನು ಶಾಶ್ವತವಾಗಿ ಇರುವಂತೆ ನಮೂದಿಸಬೇಕು.

ಶಿರಸಿ: ಪ್ರತಿ ಸರ್ಕಾರಿ ಇಲಾಖೆಯಲ್ಲಿಯೂ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆಯನ್ನು ಶಾಶ್ವತವಾಗಿ ಇರುವಂತೆ ನಮೂದಿಸಬೇಕು. ಗ್ರಾಪಂಗಳಲ್ಲಿ ಮಕ್ಕಳ ಗ್ರಾಮ ಸಭೆ ಕಡ್ಡಾಯವಾಗಿ ನಡೆಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅಧಿಕಾರಿಗಳಿಗೆ ಸೂಚಿಸಿದರು.

ಅವರು ಬುಧವಾರ ನಗರದ ಆಡಳಿತ ಸೌಧದಲ್ಲಿ ಶಿರಸಿ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಬೇಕು. ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಸಹಾಯಧನದಲ್ಲಿ ನಿರ್ಮಿಸುವ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿಸಿದ ಮಕ್ಕಳ ಸಂಖ್ಯೆಯೂ ರಾಜ್ಯದಲ್ಲಿ ಅಧಿವಾಗಿದೆ. ಕೃಷಿ ಹೊಂಡದ ಸುತ್ತಲೂ ಮುಂಜಾಗ್ರತಾ ಕ್ರಮ ವಹಿಸಬೇಕು. ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಸಂಖ್ಯೆ ಜಾಸ್ತಿ ಇದೆ. ಮಕ್ಕಳ ಸುರಕ್ಷತೆ ಹಾಗೂ ರಕ್ಷತೆ ಪ್ರತಿಯೊಂದು ಇಲಾಖೆಗೆ ಜವಾಬ್ದಾರಿ ಇದೆ ಎಂದ ಅವರು, ಶಾಲಾ ಕಟ್ಟಡಗಳ ಮೇಲೆ ಹಾಗೂ ಆವರಣದಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುವುದನ್ನು ತೆರವುಗೊಳಿಸಬೇಕು. ಸಮೀಕ್ಷೆ ನಡೆಸಿ, ತೆರವುಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಅವಘಡಗಳ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳ ವಸತಿಗೃಹದಲ್ಲಿ ಮಂಜೂರಾತಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದಾರೆ. ರುಚಿಕಟ್ಟಾದ ಊಟೋಪಚಾರ ನೀಡಬೇಕು. ಸಿಬ್ಬಂದಿ ನಡವಳಿಕೆಯೂ ಉತ್ತಮ ಇರಬೇಕು ಎಂದರು.

ಸಾರಿಗೆ ಸಂಸ್ಥೆಯು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಸ್ಸಿನ ಹೆಚ್ಚಿನ ಸರತಿ ಹಾಕಬೇಕು. ಮಕ್ಕಳು ಕೈ ಮಾಡಿದಲ್ಲಿ ಬಸ್ಸುಗಳ ನಿಲುಗಡೆ ಮಾಡುವುದರ ಜತೆ ಮಕ್ಕಳ ಜತೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಸಿಬ್ಬಂದಿಗಳ ಮೇಲೆ ದೂರು ಬಂದರೆ ಮಕ್ಕಳ ರಕ್ಷಣಾ ಆಯೋಗವು ದೂರು ದಾಖಲಿಸಿಕೊಳ್ಳುವುದರ ಜತೆ ಪೊಲೀಸ್ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.

ಸಸ್ಯ ಶ್ಯಾಮಲಾ, ಚಿಣ್ಣರ ದರ್ಶನ, ಚಿಣ್ಣರಿಗೊಂದು ವನ ಸೇರಿದಿಂತೆ ಇನ್ನಿತರ ಕಾರ್ಯಕ್ರಮಗಳ ಕುರಿತು ಪ್ರತಿ ಶಾಲೆಗಳಿಗೂ ಅರಣ್ಯ ಇಲಾಖೆಯು ತೆರಳಿಗೆ ಮಕ್ಕಳು ಈ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ, ಮಧ್ಯಾಹ್ನ ಬಿಸಿಯೂಟವನ್ನು ಸೇವಿಸಬೇಕು ಎಂದು ವಿನಂತಿ ಮಾಡುತ್ತೇನೆ. ತಾಲೂಕಾ ಮಟ್ಟದಲ್ಲಿ ತಹಸೀಲ್ದಾರ ನೇತೃತ್ವದಲ್ಲಿ ಮಕ್ಕಳ ರಕ್ಷಣಾ ಸಭೆಯನ್ನು ಪ್ರತಿ ೩ ತಿಂಗಳಿಗೊಮ್ಮೆ ಕರೆಯಬೇಕು ಎಂದು ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ಸಲಹಾ ಪೆಟ್ಟಿಗೆ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿಯ ನಡಾವಳಿಗಳನ್ನು, ಅರಿವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಪಂ ವತಿಯಿಂದ ನಡೆಸಲಾಗುವ ಗ್ರಾಮ ಸಭೆಗಳಲ್ಲಿ ಮಕ್ಕಳು ಭಾಗವಹಿಸುತ್ತಿದ್ದು, ಗಣೇಶನಗರದಲ್ಲಿ ೫ ಮಕ್ಕಳು ಹಾಗೂ ದನಗನಳ್ಳಿ ಒಬ್ಬ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅವರನ್ನು ಶಾಲೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ, ಪೊಲೀಸ್ ಇಲಾಖೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಕ್ಕಳಿಗೆ ಕೈಗೊಂಡ ಕಾರ್ಯಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರೇಡ್-೨ ತಹಸೀಲ್ದಾರ ರಮೇಶ ಹೆಗಡೆ, ತಾಪಂ ಇಒ ಚನ್ನಬಸಪ್ಪ ಹಾವಣಗಿ, ಸಿಪಿಐ ಶಶಿಕಾಂತ ವರ್ಮಾ ಇದ್ದರು.

ಶಾಲೆಗಳಲ್ಲಿ ಬ್ಯಾಗ್ ಲೆಸ್ ಡೇ ಸರಿಯಾಗಿ ನಡೆಯುತ್ತಿಲ್ಲ. ಪೊಲೀಸ್ ಇಲಾಖೆಯು ತೆರೆದ ಮನೆ ಕಾರ್ಯಕ್ರಮ ಕಡ್ಡಾಯವಾಗಿ ನಡೆಸಬೇಕು. ಪೊಕ್ಸೋ, ಬಾಲ್ಯವಿವಾಹ ಸೇರಿದಂತೆ ಇನ್ನಿತರ ಕುರಿತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ.

ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಮಕ್ಕಳ ಸಂಖ್ಯೆಯನ್ನು ಸಮೀಕ್ಷೆ ನಡೆಸಿ, ೩ ದಿನದೊಳಗಡೆ ಮಕ್ಕಳ ರಕ್ಷಣಾ ಇಲಾಖೆಗೆ ನೀಡಬೇಕು. ಅವರಿಗೆ ಶಿಕ್ಷಣ, ಆರೋಗ್ಯ ಇಲಾಖೆಯಿಂದ ಗುಣಮಟ್ಟದ ಸೇವೆ ನೀಡಲು ರಾಜ್ಯ ಮಟ್ಟದಲ್ಲಿಯೂ ಚರ್ಚೆ ನಡೆಸಲಾಗುತ್ತದೆ. ತಾಲೂಕಿನಲ್ಲಿರುವ ಜಲಪಾತಗಳಿಗೆ ಮಕ್ಕಳು ತೆರಳಿ, ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪುತ್ತಿರುವ ಬಗ್ಗೆ ದೂರು ಕೇಳಿಬಂದಿದೆ. ಫಾಲ್ಸ್‌ಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರವಾಸೋದ್ಯಮ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಜತೆ ಪ್ರತ್ಯೇಕ ಸಭೆ ನಡೆಸಲಾಗುತ್ತದೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ