ಮಕ್ಕಳ ಹಾಲಿನ ಪುಡಿಗೂ ಗಂಟು ಬಿದ್ದ ದುರುಳರು

KannadaprabhaNewsNetwork |  
Published : Mar 24, 2025, 12:35 AM IST
ಪೋಟೋ ಇದೆ. | Kannada Prabha

ಸಾರಾಂಶ

ಸರ್ಕಾರ ಅನ್ನಭಾಗ್ಯ ಅಕ್ಕಿ ವಿತರಣೆಯ ಪ್ರಮಾಣ ಹೆಚ್ಚಿಸಿದ ನಂತರ ಅಕ್ರಮ ಅಕ್ಕಿ ದಂಧೆ ವ್ಯಾಪಕವಾಗಿ ತಲೆ ಎತ್ತಿದೆ ಎನ್ನುವ ಚರ್ಚೆಗಳ ಮಧ್ಯೆಯೇ ಅಂಗನವಾಡಿ ಹಾಗೂ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿ ಸರ್ಕಾರ ಹಾಲಿನ ಪುಡಿಯನ್ನು ಪೂರೈಕೆ ಮಾಡುತ್ತಿದೆ. ಆದರೆ ಹಾಲಿನ ರೂಪದಲ್ಲಿ ಮಕ್ಕಳ ಹೊಟ್ಟೆ ಸೇರಬೇಕಾಗಿದ್ದ ಹಾಲಿನ ಪುಡಿ ದುರುಳರ ಪಾಲಾಗುತ್ತಿದೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಸರ್ಕಾರ ಅನ್ನಭಾಗ್ಯ ಅಕ್ಕಿ ವಿತರಣೆಯ ಪ್ರಮಾಣ ಹೆಚ್ಚಿಸಿದ ನಂತರ ಅಕ್ರಮ ಅಕ್ಕಿ ದಂಧೆ ವ್ಯಾಪಕವಾಗಿ ತಲೆ ಎತ್ತಿದೆ ಎನ್ನುವ ಚರ್ಚೆಗಳ ಮಧ್ಯೆಯೇ ಅಂಗನವಾಡಿ ಹಾಗೂ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿ ಸರ್ಕಾರ ಹಾಲಿನ ಪುಡಿಯನ್ನು ಪೂರೈಕೆ ಮಾಡುತ್ತಿದೆ. ಆದರೆ ಹಾಲಿನ ರೂಪದಲ್ಲಿ ಮಕ್ಕಳ ಹೊಟ್ಟೆ ಸೇರಬೇಕಾಗಿದ್ದ ಹಾಲಿನ ಪುಡಿ ದುರುಳರ ಪಾಲಾಗುತ್ತಿದೆ.

ಬೆಟಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಈಚೆಗೆ ನಡೆಸಿದ ದಾಳಿಯ ವೇಳೆಯಲ್ಲಿ ಈ ರೀತಿಯ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕ್ಷೀರಭಾಗ್ಯ ಯೋಜನೆಯಡಿ ಪೂರೈಕೆ ಮಾಡಿರುವ ನಂದಿನಿ ಬ್ರಾಂಡಿನ ಹಾಲಿನ ಪುಡಿ, ನೆರೆಯ ರಾಜ್ಯಗಳ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗಲು ಸಾಗಾಟವಾಗುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ದೊಡ್ಡ ಬೆಲೆ: ರಾಜ್ಯದಲ್ಲಿ ನಂದಿನಿ ಹಾಲಿನ ಪುಡಿ ಸರಬರಾಜು ಮಾಡಲಾಗಿದ್ದು ಅತ್ಯುತ್ಕೃಷ್ಟ ಗುಣಮಟ್ಟವನ್ನು ಹೊಂದಿದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಹಾಗಾಗಿ ಇಲ್ಲಿ ಅತೀ ಕಡಿಮೆ ಬೆಲೆಗೆ ಹಾಲಿನ ಪುಡಿಯನ್ನು ಖರೀದಿಸುವ ದುರುಳರು ಅನ್ಯ ರಾಜ್ಯಗಳಿಗೆ ಕಳ್ಳಸಾಗಾಟ ಮಾಡಿ ದೊಡ್ಡ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದು, ಮಕ್ಕಳ ಪೌಷ್ಟಿಕತೆ ಹೆಚ್ಚಿಸುವಲ್ಲಿ ಪೂರೈಕೆಯಾದ ವಸ್ತು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಅತೀವ ಬೇಸರ ಸಂಗತಿಯಾಗಿದೆ.

ಒಪನ್ ಪೌಡರ್ಸ್: ಸದ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಹಾಲಿನ ಪುಡಿಯ ಪ್ಯಾಕೆಟ್ ಮೇಲೆ, ಕರ್ನಾಟಕ ಸರ್ಕಾರ, ಕ್ಷೀರಭಾಗ್ಯ ಯೋಜನೆ ಎನ್ನುವ ಮುದ್ರಣವಿರುತ್ತದೆ. ಇದನ್ನು ಖರೀದಿಸುವ ಅಕ್ರಮ ದಂಧೆಕೋರರು ಮತ್ತೆ ಪ್ಯಾಕ್ ಮಾಡುವ ಗೋಜಿಗೆ ಹೋಗದೇ ಪ್ಯಾಕೆಟ್‌ಗಳನ್ನು ಹರಿದು ಹಾಕಿ ಸ್ಥಳೀಯವಾಗಿ (ಒಪನ್ ಪೌಡರ್) ಮಾರಾಟ ಮಾಡುತ್ತಿದ್ದಾರೆ. ನಂದಿನಿ ಬ್ರ್ಯಾಂಡಿನ ಹಾಲಿನ ಪುಡಿ ಗುಣಮಟ್ಟ ಹೊಂದಿರುವುದರಿಂದ ಅಕ್ಕಪಕ್ಕದ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅಕ್ರಮ ದಂಧೆ ತಲೆ ಎತ್ತಲೂ ಇದು ಪ್ರಮುಖ ಕಾರಣವಾಗಿದೆ.

313 ಕೆಜಿ ಹಾಲಿ ಪುಡಿ ವಶ: ಮಾ. 20ರಂದು ಬೆಟಗೇರಿ ಪೊಲೀಸರು ನಡೆಸಿದ ದಾಳಿಯಲ್ಲಿ ₹1.12 ಲಕ್ಷ ಮೌಲ್ಯದ 313 ಕೆಜಿ ಹಾಲಿನ ಪುಡಿಯನ್ನು ವಶಕ್ಕೆ ಪಡೆದಿದ್ದಾರೆ. ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟಪ್ಪನವರ ನೀಡಿದ ದೂರು ಆಧರಿಸಿ, ಹಾಲಿನ ಪುಡಿ ಸಾಗಿಸುತ್ತಿದ್ದ ಲಾರಿ ಹಾಗೂ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಮಾವೀನಹಳ್ಳಿಯ ಸಂತೋಷ ಶಿಂಧೆ, ಬೆಟಗೇರಿ ನಿವಾಸಿ ಖಾಜಾಹುಸೇನ ಖಾದರನ್ನವರ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಹೈದರಾಬಾದ್‌ಗೆ ಸಾಗಿಸುತ್ತಿದ್ದ ಕ್ಷೀರಭಾಗ್ಯ ಹಾಲಿನ ಪುಡಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದು ಜಿಲ್ಲೆಯಲ್ಲಿ ಅಕ್ರಮ ಹಾಲಿನ ಪುಡಿ ದಂಧೆ ತಲೆ ಎತ್ತಿರುವುದು ಸ್ಪಷ್ಟವಾಗುತ್ತದೆ.

ಏನು ಮಾಡುತ್ತಿದ್ದಾರೆ ಅಧಿಕಾರಿಗಳು?:

ಗದಗ ಜಿಲ್ಲೆಯಲ್ಲಿ ತಲೆ ಎತ್ತಿರುವ ಈ ಅಕ್ರಮ ಹಾಲಿನ ಪುಡಿ ದಂಧೆಯಲ್ಲಿ ನಂದಿನಿ ಬ್ರ್ಯಾಂಡಿನ ಹಾಲಿನ ಪುಡಿ ಸರಬರಾಜು ಮಾಡುವವರೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೋ ಅಥವಾ ಅಂಗನವಾಡಿ ಕಾರ್ಯಕರ್ತೆಯರೋ ಅಥವಾ ಅಕ್ಷರ ದಾಸೋಹ ಯೋಜನೆ ಅಧಿಕಾರಿಗಳೋ ಯಾರು ಶಾಮೀಲಾಗಿದ್ದಾರೆ ಎನ್ನುವುದು ಮಾತ್ರ ಇನ್ನು ನಿಗೂಢವಾಗಿದೆ. ಆದರೆ ಮೇಲ್ನೋಟಕ್ಕೆ ಅಧಿಕಾರಿಗಳು ಶಾಮೀಲು ಇಲ್ಲದೇ ಇದೆಲ್ಲಾ ಸಾಧ್ಯವೇ ಇಲ್ಲ ಎನ್ನುವುದಂತೂ ಸತ್ಯ.

ಹಾಲಿನ ಪುಡಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿರುವುದು ಗೊತ್ತಾಗಿದೆ. ನಾನು ರಜೆಯಲ್ಲಿದ್ದೆ, ಈ ಬಗ್ಗೆ ಇಲಾಖೆಯ ತನಿಖೆ ನಡೆಯುತ್ತಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಶಂಕರ್ ಹಡಗಲಿ ಹೇಳಿದರು.

ಕ್ಷೀರಭಾಗ್ಯದ ಹಾಲಿನ ಪುಡಿ ವಶಪಡಿಸಿಕೊಂಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ದಾಳಿ ನಡೆದಿದ್ದರೆ ಆ ಪ್ಯಾಕೆಟ್ ಮೇಲಿನ ಬ್ಯಾಚ್ ನಂಬರ್ ನೋಡಿ ಅದರ ಮಾಹಿತಿ ಪಡೆಯಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ