ಸೈನ್ಸ್ ಎಕ್ಸ್ ಪೋ ಕಾರ್ಯಕ್ರಮ । ಎಲ್ಲ ವಲಯದಲ್ಲಿಯೂ ವ್ಯಾಪಿಸಿರುವ ಸೈನ್ಸ್ । ಇದರಿಂದ ಜೀವನಶೈಲಿ ಬದಲು
ವಿಜ್ಞಾನವ ಅನುಸರಿಸುವುದರಿಂದ ಮಕ್ಕಳ ಮನಸ್ಸು ವಿಕಾಸವಾಗುತ್ತದೆ. ಬೌದ್ಧಿಕತೆ ಬೆಳವಣಿಗೆಗೆ ಅದು ಪೂರಕ ವಾತಾವರಣ ಸೃಷ್ಠಿಸುತ್ತದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ ಸ್ವಾಮಿ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ನ್ಯಾಷನಲ್ ಇಂಗ್ಲೀಷ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸೈನ್ಸ್ ಎಕ್ಸ್ ಪೋ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಸಂದರ್ಭದ ಈ ವೇಳೆ ವಿಜ್ಞಾನ ಎಲ್ಲ ವಲಯದಲ್ಲಿಯೂ ವ್ಯಾಪಿಸಿದೆ. ನಿತ್ಯದ ಪ್ರತಿ ಆಗು ಹೋಗುಗಳಿಗೆ ವಿಜ್ಞಾನದ ಚಲನೆಯಿದೆ. ವಿಜ್ಞಾನದಿಂದ ನಮ್ಮ ಜೀವನ ಶೈಲಿಯೇ ಬದಲಾಗಿದೆ. ಇಂತಹ ವಿಜ್ಞಾನ ಮೇಳಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳ ಮನಸ್ಸು ವಿಕಾಸ ವಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳು ಸಮಾಜಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿವೆ ಎಂದರು.ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ತಯಾರಿಸಿರುವ ಮಾದರಿಗಳು ಇಷ್ಟಕ್ಕೇ ಸೀಮಿತವಾಗದೇ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಅವರ ಭವಿಷ್ಯ ಉಜ್ವಲ ಮಾಡಿಕೊಳ್ಳಬೇಕು. ವಿಜ್ಞಾನ ಅಧ್ಯಯನ ಮಾಡಿದವರಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಇಂತಹ ಮಾದರಿಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಲಿ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಕ್ತರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಜ್ಞಾನಿಗಳ ಸಾಧನೆ ಪರಿಚಯವಾಗಬೇಕು, ವಿಜ್ಞಾನದ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಬೇಕು. ತಮ್ಮ ಛಾಪನ್ನು ಮೂಡಿಸಿ ಶಾಲೆಗೆ , ಶಿಕ್ಷಕರಿಗೆ, ತಂದೆ ತಾಯಿಯರಿಗೆ ಗೌರವ ತರಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಸೈಯದ್ ಶುಜತ್, ವ್ಯವಸ್ಥಾಪಕ ಇಮ್ರಾನ್ ಸೈಫ್, ಪ್ರಾಂಶುಪಾಲೆ ರುಕಿಯಾ ಖಾನಂ, ಉಪ ಪ್ರಾಂಶುಪಾಲ ಶಹನಾಜ್, ಶಿಕ್ಷಕರಾದ ದಿವ್ಯಾ, ಮೋಹಸೀನಾ, ಸಾಜಿದ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.