ಕೊಪ್ಪಳ: ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಮತ್ತು ರಕ್ಷಿಸುವುದು ಶಿಕ್ಷಕರ ಮೂಲಭೂತ ಕರ್ತವ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಮಕ್ಕಳು ಪೋಷಕರಿಗಿಂತ ಶಿಕ್ಷಕರ ಮಾತಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದ್ದರಿಂದ ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ಕಂಡು ಅವರ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ನೀಡಬೇಕು. ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಕಿರುಕುಳದ ಯಾವುದೇ ಘಟನೆಯನ್ನು ನಿರ್ಲಕ್ಷಿಸಬಾರದು. ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ತಮ್ಮ ಶಾಲೆಯ ಇತರ ಶಿಕ್ಷಕರಿಗೂ ಹಂಚಿಕೊಂಡು ತಕ್ಷಣ ಅನುಷ್ಠಾನಗೊಳಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ ಮಾತನಾಡಿ, ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ಶಿಕ್ಷಕರು ಜಾಗೃತಿ ಹೊಂದುವುದು ಅಗತ್ಯ. ವಿದ್ಯಾರ್ಥಿಗಳು ಸತತ 2-3 ದಿನ ಶಾಲೆಗೆ ಗೈರುಹಾಜರಾದರೆ ಕಾರಣ ವಿಚಾರಿಸುವ ಮೂಲಕ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ತಡೆಯಲು ಸಾಧ್ಯ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್‌ಕುಮಾರ್ ಎನ್. ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳ ಅಥವಾ ಬಾಲ್ಯವಿವಾಹದ ಮಾಹಿತಿ ದೊರೆತರೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ತಿಳಿಸುವುದು ಕಾನೂನಾತ್ಮಕ ಕರ್ತವ್ಯವಾಗಿದೆ ಎಂದರು.