ಬರ ಘೋಷಣೆ ‘ಕ್ರೆಡಿಟ್’ಗಾಗಿ ಆಡಳಿತ–ಪ್ರತಿಪಕ್ಷಗಳ ಫೈಟ್

KannadaprabhaNewsNetwork |  
Published : Sep 24, 2026, 02:00 AM IST
ನೀರಿಲ್ಲದೆ ಒಣಗಿದ ನೆಲ | Kannada Prabha

ಸಾರಾಂಶ

ಬರ ಘೋಷಣೆಯಿಂದ ರೈತ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಆದರೆ, ಬರ ಘೋಷಣೆಯ ಬೆನ್ನಲ್ಲೇ ಇದರ ‘ಕ್ರೆಡಿಟ್’ ಪಡೆಯಲು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಅಂತೂ ಇಂತೂ ಕೊಪ್ಪಳ ಸೇರಿದಂತೆ ಜಿಲ್ಲೆಯ ಏಳೂ ತಾಲೂಕುಗಳನ್ನು ರಾಜ್ಯ ಸರ್ಕಾರ ಹಂತ ಹಂತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಕೊಪ್ಪಳ, ಯಲಬುರ್ಗಾ, ಕುಕನೂರು, ಕುಷ್ಟಗಿ, ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ.

ಬರ ಘೋಷಣೆಯಿಂದ ರೈತ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಆದರೆ, ಬರ ಘೋಷಣೆಯ ಬೆನ್ನಲ್ಲೇ ಇದರ ‘ಕ್ರೆಡಿಟ್’ ಪಡೆಯಲು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.

‘ನಮ್ಮ ಹೋರಾಟದಿಂದಲೇ ಬರ ಘೋಷಣೆಯಾಗಿದೆ’ ಎಂದು ಪ್ರತಿಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೇಲೆ ಪೋಸ್ಟ್‌ಗಳನ್ನು ಹಾಕುತ್ತಿದ್ದರೆ, ಇದಕ್ಕೆ ತಿರುಗೇಟು ನೀಡಿರುವ ಆಡಳಿತ ಪಕ್ಷದ ಶಾಸಕರು ಹಾಗೂ ಮುಖಂಡರು, ‘ನಮ್ಮ ನಿರಂತರ ಪ್ರಯತ್ನದಿಂದಲೇ ಸರ್ಕಾರ ಬರ ಘೋಷಣೆ ಮಾಡಿದೆ’ ಎಂದು ಹೇಳಿಕೊಳ್ಳುತ್ತಿದ್ದಾರೆ.

ಬರ ಘೋಷಣೆಯಾಗುತ್ತಿದ್ದಂತೆ ತಮ್ಮ ಶಾಸಕರಿಗೆ ಎರಡನೇ ಹಂತದ ನಾಯಕರು ಅಭಿನಂದನೆ ಸಲ್ಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಬೇಕಾದ ಬರ ಘೋಷಣೆ ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ‘ಕ್ರೆಡಿಟ್ ವಾರ್‌’ಗೆ ಕಾರಣವಾಗಿದೆ.

ಹಾನಿಯ ಲೆಕ್ಕಾಚಾರ: ಬರ ಘೋಷಣೆಯ ಹಿನ್ನೆಲೆಯಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿಯ ಲೆಕ್ಕಾಚಾರ ಆರಂಭಿಸಬೇಕಿದೆ. ಮೊದಲ ಹಂತದಲ್ಲೇ ಮೂರು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದರಿಂದ ಅಲ್ಲಿನ ಹಾನಿ ಅಂದಾಜಿನ ಸರ್ವೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಇದೀಗ ಘೋಷಣೆಯಾಗಿರುವ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳಲ್ಲಿ ಹಾನಿಯ ಲೆಕ್ಕಾಚಾರ ಮಾಡಬೇಕಿದೆ. ಹಾನಿಯ ಪ್ರಮಾಣದ ಆಧಾರದ ಮೇಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ.

ಅಣೆವಾರು ಲೆಕ್ಕಾಚಾರದಲ್ಲಿ ಎಚ್ಚರ ಅಗತ್ಯ: ಬರ ಘೋಷಣೆಯ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಣೆಯಾಗಲಿದೆ. ಆದರೆ ಇದಕ್ಕಿಂತ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೊರೆಯುವ ಬೆಳೆ ವಿಮೆ ಪರಿಹಾರವೂ ಅತ್ಯಂತ ಮಹತ್ವದ್ದಾಗಿದೆ.

ಬೆಳೆ ಹಾನಿ ಅಂದಾಜು ಮಾಡುವಾಗ ಅಂಕಿ-ಅಂಶ, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಜತೆಗೆ ವಿಮಾ ಕಂಪನಿಯ ಪ್ರತಿನಿಧಿಗಳೂ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಕೈಜೋಡಿಸುವುದು ಅಥವಾ ನಿರ್ಲಕ್ಷ್ಯದಿಂದ ಅಣೆವಾರು ಲೆಕ್ಕಾಚಾರದಲ್ಲಿ ತಪ್ಪುಗಳಾದರೆ ರೈತರಿಗೆ ದೊರೆಯಬೇಕಾದ ಬೆಳೆ ವಿಮೆ ಪರಿಹಾರಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ.

ಬರ ಘೋಷಣೆಯಾದರೂ ವಿಮಾ ಪರಿಹಾರ ಸಿಗದಿರುವ ಉದಾಹರಣೆಗಳು ಜಿಲ್ಲೆಯಲ್ಲಿವೆ. ಹೀಗಾಗಿ ಈ ಬಾರಿ ಅಣೆವಾರು ಲೆಕ್ಕಾಚಾರವನ್ನು ನಿಯಮಾನುಸಾರ ಹಾಗೂ ವಾಸ್ತವಿಕವಾಗಿ ನಡೆಸಬೇಕು ಎಂಬುದು ರೈತರ ಆಗ್ರಹವಾಗಿದೆ.ಯಡವಟ್ಟು–1: ವಿಮೆಗಾಗಿ ವರ್ಷಗಳ ಹೋರಾಟ: 2001-02ರಲ್ಲಿ ಭೀಕರ ಬರಗಾಲ ಎದುರಾದರೂ ಬೆಳೆ ಹಾನಿ ಪರಿಹಾರವನ್ನು ವಿಮಾ ಕಂಪನಿಯಿಂದ ಪಡೆಯಲು ರೈತರು ಸಂಕಷ್ಟ ಅನುಭವಿಸಿದ್ದರು.

ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ರೈತರು ಬೆಳೆ ವಿಮೆ ಪಾವತಿಸಿರುವ ಹಾಗೂ ಬರ ಘೋಷಣೆಯಾಗಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಸುಮಾರು ನಾಲ್ಕು ವರ್ಷ ಹೋರಾಟ ನಡೆಸಿ ಪರಿಹಾರ ಪಡೆದಿದ್ದರು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ರಾಜ್ಯ ಗ್ರಾಹಕರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿಯೂ ರೈತರು ಗೆಲುವು ಸಾಧಿಸಿದ್ದರು. ಆನಂತರ ರಾಷ್ಟ್ರೀಯ ಗ್ರಾಹಕರ ವೇದಿಕೆಯಲ್ಲಿಯೂ ರೈತರಿಗೆ ಅನುಕೂಲಕರ ತೀರ್ಪು ಬಂದಿತ್ತು. ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ.ಯಡವಟ್ಟು–2: 1,500 ರೈತರಿಗೆ ₹3 ಕೋಟಿ ಪರಿಹಾರ ಕೈತಪ್ಪಿತು: ಕೊಪ್ಪಳ ತಾಲೂಕಿನ ಬೆಟಗೇರಿ ಹೋಬಳಿ ವ್ಯಾಪ್ತಿಯಲ್ಲಿ ಅಣೆವಾರು ಲೆಕ್ಕಾಚಾರದಲ್ಲಿ ಗ್ರಾಮ ಸಹಾಯಕ ಹಾಗೂ ವಿಮಾ ಕಂಪನಿ ಅಧಿಕಾರಿಗಳಿಂದಾದ ಲೋಪದಿಂದ ಸುಮಾರು 1,500 ರೈತರಿಗೆ ಬರಬೇಕಿದ್ದ ₹3 ಕೋಟಿ ಬೆಳೆ ವಿಮೆ ಪರಿಹಾರ ಕೈತಪ್ಪಿತ್ತು.

ಬೆಟಗೇರಿ ಗ್ರಾಮದ ಕೆಲವು ರೈತರು ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಾಗ ಲೋಪ ಬೆಳಕಿಗೆ ಬಂದಿತ್ತು. ಶಾಲೆ ಇರುವ ಸರ್ವೆ ನಂಬರ್‌ನಲ್ಲೇ ಅಣೆವಾರು ಲೆಕ್ಕಾಚಾರ ಮಾಡಿರುವುದು ಪತ್ತೆಯಾಗಿತ್ತು. ಇದು ಗ್ರಾಮ ಸಹಾಯಕನ ತಪ್ಪಿನಿಂದ ಆಗಿರುವುದು ಗೊತ್ತಾಗಿ ಆತನನ್ನು ಅಮಾನತುಗೊಳಿಸಲಾಗಿತ್ತು.

ನಂತರ ಸರ್ಕಾರ ಮಧ್ಯಪ್ರವೇಶಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೂ ವಿಮಾ ಕಂಪನಿಯಿಂದ ಇದುವರೆಗೆ ಪರಿಹಾರ ಪಾವತಿಯಾಗಿಲ್ಲ ಎನ್ನಲಾಗಿದೆ. ಒಬ್ಬ ಅಧಿಕಾರಿಯ ತಪ್ಪಿನಿಂದ 1,500 ರೈತರಿಗೆ ಬರಬೇಕಿದ್ದ ಸುಮಾರು ₹3 ಕೋಟಿ ಪರಿಹಾರಕ್ಕೆ ತೊಂದರೆಯಾಗಿದೆ. ಇಂತಹ ಲೋಪಗಳು ಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಿದೆ.

ಕೊಪ್ಪಳ ತಾಲೂಕು ತೀವ್ರ ಬರಪೀಡಿತ: ರಾಘವೇಂದ್ರ ಹಿಟ್ನಾಳ

ಮುಂಗಾರು ಮಳೆಯ ಕೊರತೆ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ ರಾಜ್ಯ ಸರ್ಕಾರದ ಮೂರನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೊಪ್ಪಳ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.ಕೊಪ್ಪಳ ತಾಲೂಕಿನ ರೈತರು ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು, ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗಿತ್ತು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಅರ್ಹ ರೈತರಿಗೆ ಅಗತ್ಯವಿರುವ ಬೆಳೆ ಪರಿಹಾರ ಹಾಗೂ ಬರ ಪರಿಹಾರ ಕ್ರಮಗಳು ತ್ವರಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

‘ವಿರೋಧ ಪಕ್ಷದವರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೆ. ತಾಳ್ಮೆ ಇರಲಿ, ಕೊಪ್ಪಳ ತಾಲೂಕು ಮೂರನೇ ಪಟ್ಟಿಯಲ್ಲಿ ಬರುತ್ತದೆ ಎಂದು. ಇಂದು ಅದೇ ಮಾತು ನಿಜವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಬರ ಪರಿಹಾರ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಿ: ಸಿವಿಸಿ

ಕೊಪ್ಪಳ ತಾಲೂಕು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವುದನ್ನು ಸ್ವಾಗತಿಸಿರುವ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ಕೂಡಲೇ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ಈ ನಿರ್ಧಾರವನ್ನು ಜೂನ್‌ನಲ್ಲಿಯೇ ಕೈಗೊಳ್ಳಬೇಕಿತ್ತು. ವಿಳಂಬದ ವಿರುದ್ಧ ಜೆಡಿಎಸ್ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಯಿತು. ಕೊನೆಗೂ ಸರ್ಕಾರ ಅದಕ್ಕೆ ಮಣಿದಿದೆ ಎಂದು ಹೇಳಿದ್ದಾರೆ.

ವಾಸ್ತವ ಪರಿಸ್ಥಿತಿ ಎಲ್ಲರಿಗೂ ಗೊತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ. ಪರಿಹಾರ ಕಾಮಗಾರಿ ಕೈಗೊಳ್ಳಲು ಜಿಲ್ಲಾಡಳಿತದ ಬಳಿ ₹175 ಕೋಟಿ ಇದೆ ಎಂದು ಜುಲೈನಲ್ಲಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದರು. ಆದ್ದರಿಂದ ಹಣ ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ಯಾವುದೇ ವಿಳಂಬ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಪ್ರತಿ ಎಕರೆಗೆ ₹25 ಸಾವಿರ ಪರಿಹಾರಧನ ನೀಡಬೇಕು. ಮೇ ತಿಂಗಳಲ್ಲಿ ಅಕಾಲಿಕ ಬಿರುಗಾಳಿ ಹಾಗೂ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಎಕರೆಗೆ ₹5 ಲಕ್ಷ ಪರಿಹಾರ ನೀಡಬೇಕು. ಬಾಕಿ ಇರುವ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು. ಪ್ರತಿ ಹೋಬಳಿಗೊಂದು ಮೇವು ಬ್ಯಾಂಕ್ ಸ್ಥಾಪಿಸಬೇಕು. ಗುಳೆ ಹೋದ ಜನರಿಗೆ ವಿಶೇಷ ಕಾರ್ಯಕ್ರಮ ಘೋಷಿಸಬೇಕು. ಈ ಬೇಡಿಕೆಗಳ ಈಡೇರಿಕೆಯಲ್ಲಿ ವಿಳಂಬವಾದರೆ ಜೆಡಿಎಸ್ ಮತ್ತೊಮ್ಮೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ