ಹುಬ್ಬಳ್ಳಿ:
ಇದು ಇಲ್ಲಿನ ಡಿ.ಎಸ್. ಕರ್ಕಿ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಕಂಡು ಬಂದ ದೃಶ್ಯ. ಕನ್ನಡಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಪೌರಕಾರ್ಮಿಕರ ದಿನ ಆಯೋಜಿಸಿತ್ತು. ಇದಕ್ಕಾಗಿ ಪಾಲಿಕೆಯಿಂದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಮೇಯರ್ ದುರ್ಗಮ್ಮ ಬಿಜವಾಡ, ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ಪಾಲಿಕೆಯ ಆಡಳಿತ ಮಂಡಳಿ ಉಪಸ್ಥಿತವಿದ್ದು 6 ಜನ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರ ಕಾರ್ಯ ಶ್ಲಾಘೀಸಿದರು.
ಬಹಿಷ್ಕಾರ, ಪ್ರತಿಭಟನೆಈ ನಡುವೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆ ಹಾಗೂ ನೇರ ಪಾವತಿ ಪಡೆಯುವ ಪೌರಕಾರ್ಮಿಕರು ಕಾರ್ಯಕ್ರಮ ಬಹಿಷ್ಕರಿಸಿ ಅದೇ ಸಭಾಭವನದ ಹೊರಗೆ ಪ್ರತಿಭಟನೆ ನಡೆಸಿದರು.
ಧಾರವಾಡದಲ್ಲಿ ಜೂನ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸಭೆಯಲ್ಲೂ ತೆಗೆದುಕೊಂಡ ತೀರ್ಮಾನಗಳನ್ನು ಪಾಲಿಕೆ ಆಯುಕ್ತರು ಉಲ್ಲಂಘಿಸಿದ್ದಾರೆ. ಈ ಮೂಲಕ ದಲಿತ ವಿರೋಧ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಈ ನಡುವೆ ಅತ್ತ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಇತ್ತ ಪ್ರತಿಭಟನೆಯ ಕಾವು ಜೋರಾಗಿತ್ತು. ಹೀಗಾಗಿ ಪಾಲಿಕೆ ಆಯುಕ್ತರು, ಮೇಯರ್ ಆಗಮಿಸಿ ಪ್ರತಿಭಟನೆ ಹಿಂಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವೋಲಿಸುವ ಯತ್ನ ಮಾಡಿದರು. ಮುಂದೆ ಸಭೆ ನಡೆಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ನಿಮ್ಮ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆಯಲಿಲ್ಲ. ಹೀಗಾಗಿ ಗುತ್ತಿಗೆ ಹಾಗೂ ನೇರ ವೇತನ ಪಾವತಿ ಪೌರಕಾರ್ಮಿಕರನ್ನು ಹೊರಗಿಟ್ಟು ಪೌರಕಾರ್ಮಿಕರ ಕಾರ್ಯಕ್ರಮ ಮಾಡಲಾಯಿತು.
ಪೌರಕಾರ್ಮಿಕರ ಕಲ್ಯಾಣವೇ ಪಾಲಿಕೆಯ ಆಶಯ: ಘಾಳಿ
ನಗರದ ಕರ್ಕಿ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ಅವರ ಸೇವೆ ಗುರುತಿಸಿ, ಗೌರವಿಸಲು ಮತ್ತು ಕಲ್ಯಾಣಕ್ಕಾಗಿ ಮುಂದಿನ ದಿನಗಳಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪೌರಕಾರ್ಮಿಕರಿಗೆ ಪಾಲಿಕೆಯಿಂದ ನೀಡುತ್ತಿರುವ ಹಲವು ಸೌಲಭ್ಯಗಳನ್ನು ಪಟ್ಟಿ ವಿವರಿಸಿದರು. ನಿಯಮಾನುಸಾರ ಪೌರಕಾರ್ಮಿಕರಿಗೆ ಬಡ್ತಿ ನೀಡಲಾಗುತ್ತಿದೆ. ಪೌರಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ₹ 7 ಸಾವಿರ ವಿಶೇಷ ಭತ್ಯೆ ನೀಡಲಾಗಿದೆ ಎಂದರು.