ಮಕ್ಕಳ ವ್ಯವಹಾರಿಕ ಜ್ಞಾನ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ: ಜನಾರ್ಧನ್

KannadaprabhaNewsNetwork | Published : Nov 26, 2024 12:50 AM

ಸಾರಾಂಶ

ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕರು ರೈತರ ಮಕ್ಕಳಾಗಿರುವ ಕಾರಣ ತಮ್ಮೂರಿನ ತೋಟಗಳಲ್ಲಿ ಬೆಳೆಯುವ ಹಣ್ಣು, ತರಕಾರಿ, ಸೊಪ್ಪುಗಳನ್ನು ತಂದು ಮಾರಾಟ ಮಾಡಿ ಲಾಭ, ನಷ್ಟದ ಬಗ್ಗೆ ಕಲಿತುಕೊಂಡಿದ್ದಾರೆ.

ಸೂಲಿಬೆಲೆ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಇಂಥ ಕಾರ್‍ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಆಸಕ್ತಿಗೆ ಅನುಗುಣವಾಗಿ ವ್ಯಾಪಾರ ಮಾಡುವ ವಸ್ತುಗಳನ್ನು ನೀಡಿ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಎ.ಜನಾರ್ಧನ್ ರೆಡ್ಡಿ ಹೇಳಿದರು.

ಸೂಲಿಬೆಲೆ ಸರಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಶೈಕ್ಷಣಿಕ ಕಾರ್‍ಯಕ್ರಮಗಳ ಜತೆಗೆ ವ್ಯವಹಾರಿಕ ಜ್ಞಾನ ಹೆಚ್ಚಳಕ್ಕೆ ಅಗತ್ಯವಾಗಿರುವ ಮಕ್ಕಳ ಸಂತೆಯಂತಹ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಲೆಕ್ಕಾಚಾರ ಜ್ಞಾನ ಹೆಚ್ಚಿಸುತ್ತಿದ್ದಾರೆ. ವ್ಯಾಪಾರ ಮಾಡುವ ಕಲೆ, ಹಣಕಾಸಿನ ವ್ಯವಹಾರ, ವ್ಯಾಪಾರದಲ್ಲಿ ಆರ್ಥಿಕ ಲಾಭ, ನಷ್ಟದ ಬಗ್ಗೆ ತಿಳಿಯಲು ಸಹ ಮಕ್ಕಳ ಸಂತೆ ಸಹಕಾರಿಯಾಗಿದೆ. ಮಕ್ಕಳು ತಮ್ಮಗಿಷ್ಟವಾದ ವಸ್ತುಗಳನ್ನು ತಂದು ಮಾರಾಟ ಮಾಡುವುದು, ಗ್ರಾಹಕರನ್ನು ಸೆಳೆಯುವುದು ಒಂದು ಕಲೆ. ಅದನ್ನು ಇಂಥ ಕಾರ್‍ಯದಲ್ಲಿ ಮೈಗೂಡಿಸಿಕೊಳ್ಳಲು ಅನುಕೂಲವಾಗಲಿದೆ. ಮಕ್ಕಳ ಜತೆ ಪೋಷಕರು ಆಗಮಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್‍ಯವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ವೈ ನಾಗರಾಜ್ ಮಾತನಾಡಿ, ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕರು ರೈತರ ಮಕ್ಕಳಾಗಿರುವ ಕಾರಣ ತಮ್ಮೂರಿನ ತೋಟಗಳಲ್ಲಿ ಬೆಳೆಯುವ ಹಣ್ಣು, ತರಕಾರಿ, ಸೊಪ್ಪುಗಳನ್ನು ತಂದು ಮಾರಾಟ ಮಾಡಿ ಲಾಭ, ನಷ್ಟದ ಬಗ್ಗೆ ಕಲಿತುಕೊಂಡಿದ್ದಾರೆ ಎಂದರು.

ಗಮನಸೆಳೆದ ಸೊಪ್ಪು ತರಕಾರಿ: ಸಂತೆಯಲ್ಲಿ ಸೊಪ್ಪು, ಹಣ್ಣುಗಳು, ಪಾನಿಪೂರಿ, ಕಡಲೆ ಕಾಯಿ ಎಲ್ಲ ರೀತಿಯ ತರಕಾರಿಗಳನ್ನು ತಂದು ಮಕ್ಕಳು ಮಾರಾಟ ಮಾಡಿದ್ದು ಗಮನ ಸೆಳೆಯಿತು.

ಶಿಕ್ಷಣ ಇಲಾಖೆ ಬಿಆರ್‌ಸಿ ನಾಗರಾಜ್, ಜೇನುಗೂಡು ಟ್ರಸ್ಟ್ ಕಾರ್‍ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಗ್ರಾಪಂ ಸದಸ್ಯೆ ಅನಿತಾ ಆನಂದ್, ಗ್ರಾಪಂ ಸದಸ್ಯೆ ಸೌಮ್ಯಶ್ರೀ, ಮುಖಂಡರಾದ ಆಶ್ವಥ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ನರಸಿಂಹಮೂರ್ತಿ, ಶಾಲಾ ಶಿಕ್ಷಕಿಯರಾದ ರಾಧಿಕಾ, ವನಜಾ, ಲಕ್ಷ್ಮೀ, ಮಂಜುಳಾ. ಪತ್ರಕರ್ತ ಎಂ.ಪ್ರಶಾಂತ್ ಹಾಜರಿದ್ದರು.

Share this article