ಕನ್ನಡಪ್ರಭ ವಾರ್ತೆ ಪಾಂಡವಪುರ
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜಿಪಿ ಕಾರ್ಯಕರ್ತರು ಗುರುವಾರ ಪೊಲೀಸ್ ಠಾಣೆಗೆ ತೆರಳಿ, ಯುವತಿ ಕಾಣೆಯಾಗಿರುವುದು ಇದು ಲವ್ ಜಿಹಾದ್ ಪ್ರಕರಣವಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮದ ಗೌಸ್ ಪಾಷಾ ಪುತ್ರ ಮುಜಾಸಿನ್ ಪಾಷಾ, ಶಿವಣ್ಣರ ಮಗಳು ಎಸ್.ಸಹನಾರನ್ನು ನಂಬಿಸಿ ಪ್ರೀತಿ ಬಲೆಗೆ ಸಿಲುಕಿಸಿದ್ದಾನೆ. ಈ ಪ್ರಕರಣ ಕೇವಲ ಪ್ರೇಮ ಪ್ರಕರಣವಲ್ಲ. ಇದರ ಹಿಂದೆ ಲವ್ ಜಿಹಾದ್ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ದೂರಿದರು.ಹಿಂದೂ ಯುವತಿಯರನ್ನು ಲವ್ ಜಿಹಾದ್‌ಗೆ ಕೆಡವಲು ದೊಡ್ಡ ಹುನ್ನಾರವೇ ನಡೆದಿದೆ. ಗ್ರಾಮದಲ್ಲಿ ಈ ಹಿಂದೆ ನಾಯಿ ಮಾಂಸ ಮಾರಾಟ ಹಾಗೂ ಕೋಮು ಗಲಭೆ ಸೃಷ್ಟಿಗೆ ಅಗತ್ಯ ಬೆಳವಣಿಗೆಗಳು ನಡೆದಿವೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ ಎಂಬ ಮಾಹಿತಿ ನಮಗೂ ಲಭ್ಯವಾಗಿದೆ. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದರು.
ನಮಗೆ ನ್ಯಾಯ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಹೋರಾಟ ಮತ್ತು ಪ್ರತಿಭಟನೆಯ ಹಾದಿ ಹಿಡಿಯುತ್ತಿಲ್ಲ. ಈ ಪ್ರಕರಣದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ಅಥವಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆದರೆ ನಾವು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಶರತ್ ಕುಮಾರ್ ಮಾತನಾಡಿ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪತ್ತೆಗೆ ಕ್ರಮ ಕೈಗೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಯುವತಿಯನ್ನು ಮಂಡ್ಯದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ನೀವು ಹೇಳಿರುವ ಎಲ್ಲಾ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.