ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬ ಅಧಿಕಾರಿಯೂ ಸಂವಿಧಾನವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು.ಇಲ್ಲದಿದ್ದರೆ ಸಂವಿಧಾನದ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗ ಕಿವಿಮಾತು ಹೇಳಿದರು.ಭಾರತೀಯ ಸಾರ್ವಜನಿಕಆಡಳಿತ ಸಂಸ್ಥೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ, ಐಐಪಿಐ ಸಂಯುಕ್ತಾಶ್ರಯದಲ್ಲಿ ಕೆ.ಎ.ಎಸ್ ತಾಲೂಕು ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಮೂಲ ಆಶಯ. ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. ಸ್ವಾತಂತ್ರ್ಯ ಬಂದು 78 ವರ್ಷ ಆಗುತ್ತಿದೆ. ಆದರೂ ಸಂವಿಧಾನದ ಧ್ಯೇಯೋದ್ದೇಶಗಳು ಇನ್ನೂ ಜಾರಿಯಾಗಿಲ್ಲ. ಸಮಾನ ಅವಕಾಶಗಳು ಇನ್ನೂ ಸಿಕ್ಕಿಲ್ಲ. ಸಮಾನತೆ, ಬ್ರಾತೃತ್ವ ನೆಲೆಸಿಲ್ಲ. ಏಕೆ ಎಂಬುದನ್ನು ನಾವು ಪ್ರಶ್ನಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದರು.1949 ನವೆಂಬರ್ 25 ರಂದು ಸಂವಿಧಾನ ಜಾರಿಯ ಮೊದಲ ದಿನಅಂಬೇಡ್ಕರ್ ಅವರು ಐತಿಹಾಸಿಕ ಭಾಷಣ ಮಾಡಿದ್ದರು. ಅದರಲ್ಲಿ ಅವರು, ಅಸಮಾನತೆ, ವೈರುದ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಅಸಮಾನತೆ ಅಳಿಸದಿದ್ದರೆ , ಅಸಮಾನತೆಗೆ ಒಳಗಾದ ಜನ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಎಚ್ಚರಿಸಿದ್ದರು.ಇದು ಪ್ರತಿಯೊಬ್ಬ ಅಧಿಕಾರಿಗೆ ನೀಡಿರುವ ಎಚ್ಚರಿಕೆ. ಪ್ರಜಾಪ್ರಭುತ್ವದ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಈ ಜವಾಬ್ದಾರಿ ನಿರ್ವಹಿಸದಿದ್ದರೆ ಏನಾಗುತ್ತದೆ ಎನ್ನುವುದನ್ನು ಅಂಬೇಡ್ಕರ್ ಎಚ್ಚರಿಸಿದ್ದಾರೆ ಎಂದರು.ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಬುದ್ದನಿಂದ, ಬಸವಣ್ಣ, ಅಂಬೇಡ್ಕರ್ ಎಲ್ಲರೂ ಜಾತಿ ರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಆದರೂ ಜಾತಿ ಹೋಗಿಲ್ಲ . ಅದಕ್ಕೇ ಲೋಹಿಯಾ ಅವರು, ನಮ್ಮ ಸಮಾಜ ಚಲನೆ ರಹಿತವಾದ ವ್ಯವಸ್ಥೆ ಎಂದರು. ಎಲ್ಲರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದಾಗ ಸಮಾಜದಲ್ಲಿ ಚಲನಶೀಲತೆ ಬರುತ್ತದೆ ಎಂದರು.ಕೆಎಎಸ್ ಅಧಿಕಾರಿಗಳು ಎಂದರೆ ಬುದ್ದಿವಂತರು ಎನ್ನುವ ನಂಬಿಕೆ ಇದೆ. ನಿಮ್ಮಲ್ಲಿ ಎಷ್ಟು ಮಂದಿಗೆ ವೈಚಾರಿಕತೆ ಇದೆ. ನಿಮ್ಮಲ್ಲಿ ಎಷ್ಟು ಮಂದಿ ವೈಜ್ಞಾನಿಕಮನೋಭಾವ ಬೆಳೆಸಿಕೊಂಡಿದ್ದೀರಿ ಎನ್ನುವುದನ್ನು ಆತ್ಮವಂಚನೆ ಮಾಡಿಕೊಳ್ಳದೆ, ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಅವರು ಕರೆ ನೀಡಿದರು.ವಿದ್ಯಾವಂತರೂ ಕೂಡ ಹಣೆಬರಹ, ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರಿದ್ದಾರೆ. ದೇವರು ಹಾಗೆಲ್ಲಾ ತಾರತಮ್ಯ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಬಳಿ ಹೋಗಿ ರಿನೀವಲ್ ಮಾಡಿಕೊಳ್ಳಬೇಕು. ಆದರೆ ನಿಮಗೆ ಅಧಿಕಾರಿಗಳಿಗೆ ಈ ಪರಿಸ್ಥಿತಿ ಇಲ್ಲ. ಹೀಗಾಗಿ ನಿಮ್ಮಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸರ್ಕಾರ ರೂಪಿಸುವ ಜನಪರವಾದ ಕಾರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.ಕೊಳ್ಳುವ ಶಕ್ತಿ ಹೆಚ್ಚಿರುವ ಸಮಾಜ ಆರ್ಥಿಕವಾಗಿ ಪ್ರಗತಿ ಕಾಣುತ್ತದೆ. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿರುವುದು ಹೇಗೆ ಎನ್ನುವುದನ್ನು ಮುಖ್ಯಮಂತ್ರಿಗಳು ವಿವರಿಸಿದರು.ನಮಗಿಂತ ಬುದ್ದಿವಂತರು ಸಮಾಜದಲ್ಲಿ ಇರ್ತಾರೆ. ರೈತರು ಅವರ ಕ್ಷೇತ್ರದಲ್ಲಿ ನಮಗಿಂತ ಬುದ್ದಿವಂತರು. ಅವಕಾಶ ಇಲ್ಲದ ಬಹಳ ಮಂದಿ ಬುದ್ದಿವಂತರು ಸಮಾಜದಲ್ಲಿ ತುಂಬಿದ್ದಾರೆ. ಅವರಿಗೆ ಅವಕಾಶ ಸಿಕ್ಕಾಗ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದರು.ಕೋಮುಗಲಭೆ, ಸುಳ್ಳು ಸುದ್ದಿ, ಜಾತಿ ಶೋಷಣೆ, ಧಾರ್ಮಿಕ ಶೋಷಣೆಗಳು ಇರುವವರೆಗೆ ಅಸಮಾನತೆ ಇರುತ್ತದೆ ಎಂದರು.ಸಂವಿಧಾನದ ಆಶಯಗಳು ಈಡೇರಿಸುವ ಜವಾಬ್ದಾರಿ ನಿಮ್ಮ ಮತ್ತು ನಮ್ಮ ಮೇಲಿದೆ. ಇದನ್ನು ಸರಿಯಾಗಿ ನಿರ್ವಹಿಸೋಣ, ಕರ್ತವ್ಯಲೋಪ ಆಗುವುದು ಬೇಡ. ನಾವು ಈ ಸಮಾಜದ ಖುಣಿಗಳಾಗೋಣ. ಕೇವಲ ಅಪ್ಪ ಅಮ್ಮ ಖರ್ಚು ಮಾಡುವ ಹಣದಲ್ಲಿ ನೀವು ಅಧಿಕಾರಿಗಳಾಗಲು, ನಾವು ಶಾಸಕರು, ಸಚಿವರು ಆಗಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಋಣ ನಮ್ಮ ಮೇಲಿದೆ. ಇದನ್ನು ಮರೆಯಬಾರದು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗಿರಿಜನ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ. ರಣದೀಪ್, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವಸ್ವಾಮಿ ಸೇರಿ ಹಲವರು ಇದ್ದರು.