ಎಂಪಿ ಚುನಾವಣೆಗೆ ಚಿಂಚೋಳಿ ಮತಕ್ಷೇತ್ರದಲ್ಲಿ ಸಿದ್ಧತೆ: ಫೌಜಿಯಾ ತರನ್ನುಮ್

KannadaprabhaNewsNetwork | Updated : Apr 03 2024, 08:47 AM IST

ಸಾರಾಂಶ

ಹಿರಿಯ ಮತದಾರರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡಬಹುದಾಗಿದೆ. ಇಲ್ಲವೇ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬಹುದಾಗಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ಮತ್ತು ಮತದಾರರಿಗೆ ಯಾವುದೇ ಅಮಿಷವೊಡ್ಡುವಂತಹ ವಿಡಿಯೋಗಳಿದ್ದರೆ ಅವುಗಳನ್ನು ಸಿ ವ್ಹಿಜಿಲ್‌ ಮೂಲಕ ದೂರು ಸಲ್ಲಿಸಬಹುದಾಗಿದೆ

 ಚಿಂಚೋಳಿ  : ಬೀದರ್‌ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಚುನಾವಣೆ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿಯೊಂದು ಮತಗಟ್ಟೆ ಕೇಂದ್ರಗಳಲ್ಲಿ ಪೊಲೀಸ್‌ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಅವರು ಚಿಂಚೋಳಿ ತಾಲೂಕಿನ ಗಡಿಪ್ರದೇಶದ ಮಿರಿಯಾಣ ಚೆಕ್‌ಪೋಸ್ಟ್‌ ಮತ್ತು ಪಟ್ಟಣದ ಚಂದಾಪೂರ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ಟ್ರಾಂಗ್‌ ರೂಂ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಲೂಕಿನ ಶಿವರಾಪೂರ, ತುಮಕುಂಟಾ, ಮಿರಿಯಾಣ, ಕುಸರಂಪಳ್ಳಿ ಮತ್ತು ಐನಾಪೂರ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಬೇರೆ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪ್ರತಿಯೊಂದು ವಾಹನಗಳನ್ನು ಜಿಪಿಎಸ್ ಮಾಡಲಾಗುತ್ತಿದೆ ಎಂದರು.

85  ವರ್ಷ ಮೇಲ್ಪಟ್ಟ ಮತದಾರರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡಬಹುದಾಗಿದೆ. ಇಲ್ಲವೇ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಬಹುದಾಗಿದೆ. ಚುನಾವಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ಮತ್ತು ಮತದಾರರಿಗೆ ಯಾವುದೇ ಅಮಿಷವೊಡ್ಡುವಂತಹ ವಿಡಿಯೋಗಳಿದ್ದರೆ ಅವುಗಳನ್ನು ಸಿ ವ್ಹಿಜಿಲ್‌ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಏ.೮ರಂದು ಚಿಂಚೋಳಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 556  ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಏ.26 ಇಲ್ಲವೇ 27 ರಂದು 1000 ಸಿಬ್ಬಂದಿಗೆ ಎರಡನೇ ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ಮಿರಿಯಾಣ, ಕುಸರಂಪಳ್ಳಿ, ತುಮಕುಂಟಾ, ಶಿವರಾಮಪೂರ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಚಲನವಲನ ನೋಡಲು ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕಚೇರಿಯಲ್ಲಿಯೇ ಕುಳಿತುಕೊಂಡು ನೋಡಬಹುದಾಗಿದೆ. ತಾಲೂಕಿನ ಎಲ್ಲ 243  ಮತಗಟ್ಟೆ ಕೇಂದ್ರಗಳಲ್ಲಿ ಶುದ್ಧ ನೀರು, ಶೌಚಾಲಯ, ವಿದ್ಯುತ್‌ ಸಂಪರ್ಕ ಮತ್ತು ಫ್ಯಾನ್‌, ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೀದರ ಲೋಕಸಭೆ ಚುನಾವಣೆ ಬಗ್ಗೆ ನೆರೆ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ತಾಲೂಕಿನ ಎಲ್ಲ ಸಿಬ್ಬಂದಿಗೆ ಚುನಾವಣಾ ಆಯೋಗವು ಜಾರಿಗೊಳಿಸಿದ ಎಲ್ಲ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ಹೇಳಿದರು.

ಎಸ್ಪಿ ಅಕ್ಷಯ ಹಾಕೆ, ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ, ಡಿವೈಎಸ್ಪಿ ಸಂಗಮೇಶ ಹಿರೇಮಠ, ಗ್ರೇಡ್- 2 ತಹಸೀಲ್ದಾರ ವೆಂಕಟೇಶ ದುಗ್ಗನ, ಕಾಳಗಿ ತಹಸೀಲ್ದಾರ ಘಮಾವತಿ ರಾಠೋಡ, ಮುಖ್ಯಾಧಿಕಾರಿ ಬಾಬಾಸಾಹೇಬ, ತಾಪಂ ಅಧಿಕಾರಿ ಶಂಕರ ರಾಠೋಡ, ಜೆಇ ದೇವೇಂದ್ರಪ್ಪ ಕೋರವಾರ, ಪಿಎಸ್‌ಐ ಸಿದ್ದೇಶ್ವರ, ಶಿರೆಸ್ತೆದಾರ ಸುಭಾಷ ನಿಡಗುಂದಾ, ಕಂದಾಯ ನಿರೀಕ್ಷಕ ರವಿಕುಮಾರ ಪಾಟೀಲ, ಸುಲೇಪೇಟ ಪಿಎಸ್‌ಐ ಭೀಮರಾಯ ಇತರೆ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Share this article