ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಕಾಜಿಬೀಳಗಿ ಗ್ರಾಮದ ಗೂಳೇಶ್ವರ ಮಠದ ಚಿನ್ಮಯಾನಂದ ಶ್ರೀಗಳ (76) ಅಂತ್ಯಕ್ರಿಯೆಗೆ ಗುರುವಾರ ಜನಸಾಗರವೇ ಹರಿದು ಬಂದಿತ್ತು. ಶುಕ್ರವಾರ ಮಧ್ಯಾಹ್ನ ಸಾವಿರಾರು ಭಕ್ತರು, ವಿವಿಧ ಮಠಗಳ ಶ್ರೀಗಳ ಸಮ್ಮುಖದಲ್ಲಿ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಂಗಳವಾರ ಶ್ರೀಗಳು ಭಕ್ತನೋರ್ವನ ದ್ವಿಚಕ್ರ ವಾಹನದ ಮೇಲೆ ಹುಕ್ಕೇರಿ ತಾಲೂಕಿನ ಸುಲ್ತಾನಪುರದಿಂದ ಹೊರಟ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಶ್ರೀಗಳು ಮೃತಪಟ್ಟಿದ್ದರು.ಕಾಜಿಬೀಳಗಿಯ ಮಠದ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮಠದ ಆವರಣದಲ್ಲಿ ಚಿನ್ಮಯಾನಂದ ಶ್ರೀಗಳ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. 10,000ಕ್ಕೂ ಅಧಿಕ ಕ್ರಿಯಾವಿಭೂತಿಗಳಲ್ಲಿ, ಬಿಲ್ವಪತ್ರೆಯಲ್ಲಿ ಶ್ರೀಗಳು ಲೀನರಾದರು.
ಶ್ರೀಗಳ ಪೂರ್ವಾಶ್ರಮ ಕಾಜಿಬೀಳಗಿ ಪಕ್ಕದ ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದವರು. ಮಲ್ಲಿಕಾರ್ಜುನ ಶ್ರೀಗಳ ಲಿಂಗದೀಕ್ಷೆ, ಹಾಗೂ ಸಿದ್ದೇಶ್ವರ ಶ್ರೀಗಳಿಂದ ದೀಕ್ಷೆ ಪಡೆದಿದ್ದು, ಸಿದ್ದೇಶ್ವರ ಶ್ರೀಗಳ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಈ ಹಿಂದೆ ಆಶ್ರಮದಲ್ಲಿ ಒಂದು ತಿಂಗಳಕಾಲ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ಏರ್ಪಡಿಸಿದ್ದರು. ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು, ವಿಜಯಪುರ ಬಸವಲಿಂಗ ಶ್ರೀಗಳು, ಗದಗ ಶಿವಾನಂದ ಶ್ರೀಗಳು, ಬಬಲೇಶ್ವರ ಮಹಾದೇವ ಶಿವಾಚಾರ್ಯ ಶ್ರೀಗಳು, ಹುಲ್ಯಾಳದ ಹರ್ಷಾನಂದ ಶ್ರೀಗಳು, ಕಕಮರಿ ಆತ್ಮಾರಾಮ ಶ್ರೀಗಳು, ಹಿಪ್ಪರಗಿ ಪ್ರಭುಜೀ ಬೆನ್ನಾಳ ಮಹಾರಾಜರು, ಆಲಗೂರ ಲಕ್ಷ್ಮಣಮುತ್ಯಾ, ಈಶಪ್ರಸಾದ, ಕಠಗೇರಿ ಮಹಾದೇವ ಮಹಾರಾಜರು ಸೇರಿದಂತೆ 50ಕ್ಕೂ ಅಧಿಕ ಮಠಾಧೀಶರು ಭಾಗಿಯಾಗಿದ್ದರು.ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಭಕ್ತರು ಪಾಲ್ಗೊಂಡಿದ್ದರು.