ಅಪಾಯಕ್ಕೆ ಆಹ್ವಾನಿಸುತ್ತಿದೆ ಚಿಪ್ಪಲಕಟ್ಟಿ ಸೇತುವೆ

KannadaprabhaNewsNetwork | Published : Jan 8, 2025 12:16 AM

ಸಾರಾಂಶ

ಸಾಲಹಳ್ಳಿ-ಹುಲಕಂದ ರಾಜ್ಯ ಹೆದ್ದಾರಿಯಲ್ಲಿ ಚಿಪ್ಪಲಕಟ್ಟಿಯ ಬಳಿ 1968ರಲ್ಲಿ ನಿರ್ಮಾಣಗೊಂಡ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಅಪಾಯವಿದೆ.

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ಸಾಲಹಳ್ಳಿ-ಹುಲಕಂದ ರಾಜ್ಯ ಹೆದ್ದಾರಿಯಲ್ಲಿ ಚಿಪ್ಪಲಕಟ್ಟಿಯ ಬಳಿ 1968ರಲ್ಲಿ ನಿರ್ಮಾಣಗೊಂಡ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಅಪಾಯವಿದೆ.

ಬಿಜೆಪಿ ಸರ್ಕಾರದಲ್ಲಿ ಗೊವಿಂದ ಕಾರಜೋಳ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ಮುನವಳ್ಳಿಯಿಂದ ಚೆನ್ನಾಪುರವರೆಗೆ ಕೂಡು ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಈ ರಸ್ತೆ ಮಧ್ಯೆ ಕಿ.ಮೀ 8.75ರಲ್ಲಿ ಚಿಪ್ಪಲಕಟ್ಟಿಯ ಹಳ್ಳಕ್ಕೆ ನಿರ್ಮಿಸಿರುವ ಈ ಸೇತುವೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ವಾಹನ ಸವಾರರು ಈ ಮಾರ್ಗವಾಗಿ ಸಂಚರಿಸಲು ನಿತ್ಯ ಹರಸಾಹಸ ಪಡುವಂತಾಗಿದೆ. ಇಷ್ಟಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಪರ್ಕ ಕೊಂಡಿ: ಸಾಲಹಳ್ಳಿ-ಚಿಪ್ಪಲಕಟ್ಟಿ-ಹುಲಕುಂದ ರಸ್ತೆ ರಾಮದುರ್ಗ ತಾಲೂಕಿನ ಪ್ರಮುಖ ರಸ್ತೆಯಾಗಿದೆ. ಗೋಕಾಕ, ಯಾದವಾಡ ಮತ್ತು ರಾಮದುರ್ಗ ತಾಲೂಕಿನ ಎರಡು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆಗೆ ಇದು ಮುಖ್ಯ ರಸ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯಿಂದ ರಾಮದುರ್ಗ ಪಟ್ಟಣಕ್ಕೆ ಬರುವ ರೈತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳಿಗೆ ಇದು ಅತ್ಯಂತ ಸಮೀಪದ ದಾರಿಯಾಗಿದೆ. ರೋಗಿಗಳು, ಗರ್ಭಿಣಿಯರು ತುರ್ತು ಚಿಕಿತ್ಸೆಗೆ ಹೋಗಲು ಪ್ರಮುಖ ರಸ್ತೆಯಾಗಿದೆ.

70 ಮೀಟರ್‌ ಉದ್ದ, 8.75 ಮೀಟರ್ ಅಗಲವಾಗಿರುವ ಈ ರಸ್ತೆ 2.40 ಮೀಟರ್‌ ವ್ಯಾಸದ 24 ಅಂಕಣ ಒಳಗೊಂಡಿದೆ. 24 ಅಂಕಣಗಳಲ್ಲಿ 4 ಅಂಕಣಗಳು ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳು ತಾತ್ಕಾಲಿಕವಾಗಿ ಸಿಮೆಂಟ್ ಚೀಲಗಳಲ್ಲಿ ಮರಳು ತುಂಬಿ ಸಣ್ಣ ಪುಟ್ಟ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದು, ಯಾವುದೇ ಸಂದರ್ಭದಲ್ಲಿ ಕುಸಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಜನಪ್ರತಿನಿಧಿಗಳು ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.ಚಿಪ್ಪಲಕಟ್ಟಿಯ ಸೇತುವೆಯನ್ನು ಮರು ನಿರ್ಮಾಣಕ್ಕೆ 2019ರಲ್ಲಿ ₹4 ಕೋಟಿ ಅಂದಾಜು ವೆಚ್ದ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2022 ರಲ್ಲಿ ₹5 ಕೋಟಿ ಮತ್ತು 2024ರಲ್ಲಿ ₹6 ಕೋಟಿ ವೆಚ್ಚದ ಅಂದಾಜು ಪತ್ರಿಕೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಅನುಮೋದನೆ ಕೊಟ್ಟ ತಕ್ಷಣ ಕೆಲಸ ಪ್ರಾರಂಭಸಲಾಗುವುದು.

-ರವಿಕುಮಾರ ಎಇಇ ಪಿಡಬ್ಲ್ಯುಡಿ ರಾಮದುರ್ಗಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಷ್ಟಪಡುತ್ತಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಶಾಸಕರು ಚಿಪ್ಪಲಕಟ್ಟಿ ಗ್ರಾಮದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಆದ್ಯತೆ ನೀಡದೆ ಕ್ಷೇತ್ರದ ಎಲ್ಲ ಮತದಾರರನ್ನು ಸಮನಾಗಿ ಕಾಣಬೇಕು. ಚಿಪ್ಪಲಕಟ್ಟಿ ಸೇತುವೆ ಕುಸಿದು ಅನಾಹುತ ಸಂಭವಿಸುವ ಮೊದಲು ಹೊಸ ಸೇತುವೆ ನಿರ್ಮಾಣ ಇಲ್ಲವೆ ದುರಸ್ತಿ ಕಾರ್ಯ ಕೈಗೊಳ್ಳಬೇಕು.

-ರಮೇಶ ದೇಶಪಾಂಡೆ, ಜಿಪಂ ಮಾಜಿ ಸದಸ್ಯರು

Share this article