ಚಿತ್ರದುರ್ಗ: ಯುವನಿಧಿ ಯೋಜನೆ ನೋಂದಣಿಗೆ ಡಿಸಿ ದಿವ್ಯಾಪ್ರಭು ಚಾಲನೆ

KannadaprabhaNewsNetwork |  
Published : Dec 28, 2023, 01:45 AM IST
ಜಿಲ್ಲಾಧಿಕಾರಿ ದಿವ್ಯಪ್ರಭು ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು | Kannada Prabha

ಸಾರಾಂಶ

ಜನವರಿಯಿಂದ ಯೋಜನೆ ಜಾರಿಗೆ, ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನ, ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ 1.500 ರು. ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ ಜೋಡಣೆಯ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಬರುವ ಜನವರಿಯಿಂದ ರಾಜ್ಯದಲ್ಲಿ ಜಾರಿಯಾಗಲಿದೆ. ಈ ಯೋಜನೆಯಡಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ, 2023 ತೇರ್ಗಡೆಯಾದ ಮತ್ತು ಫಲಿತಾಂಶ ಪ್ರಕಟಗೊಂಡ 180 ದಿನ ಅಥವಾ 6 ತಿಂಗಳ ಒಳಗಡೆ ಕೆಲಸ ದೊರೆಯದ ನಿರುದ್ಯೋಗಿ ಅರ್ಹ ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ 1.500 ರು. ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ ಜೋಡಣೆಯ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು ಎಂದರು.

ಕರ್ನಾಟಕದಲ್ಲಿ ವಾಸವಿದ್ದು ಕನಿಷ್ಠ 6 ವರ್ಷಗಳವರೆಗೆ ಪದವಿ ಹಾಗೂ ಡಿಪ್ಲೋಮೊ ಅಧ್ಯಯನ ಮಾಡಿದವರು, ಉನ್ನತ ವ್ಯಾಸಂಗ ಮುಂದುವರಿಸದೇ ಇರುವವರು, ಖಾಸಗಿ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಇಲ್ಲದವರು ಯೋಜನೆ ಲಾಭ ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದೆ. ಸೇವಾಸಿಂಧು ಪೋರ್ಟಲ್ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್ಎಲ್‌ಸಿ, ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ಸೇರಿ ಅಗತ್ಯ ದಾಖಲೆ ಹೊಂದಿರುವ ವಿದ್ಯಾರ್ಥಿಗಳು ಮುಂಚಿತವಾಗಿ ತಾತ್ಕಾಲಿಕ ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರ ಪಡೆದು 180 ದಿನಗಳು ಪೂರ್ಣಗೊಳ್ಳುವ ಮುಂಚೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ನಿರುದ್ಯೋಗಿ ಎಂದು ದೃಢೀಕರಿಸಬೇಕು ಮತ್ತು ಘೋಷಣೆ ನೀಡಬೇಕು.

ನೋಂದಾಯಿತ ಅಭ್ಯರ್ಥಿ ವಿವರಗಳನ್ನು ಎನ್‌ಎಡಿ ಮೂಲಕ ಪರಿಶೀಲಿಸಲಾಗುವುದು. ಮ್ಯಾನುವೆಲ್ ಮೂಲಕ ಅಪ್ಲೋಡ್ ಮಾಡಿದ ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಆಯಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ರವಾನಿಸಲಾಗುವುದು. ತಪ್ಪು ಘೋಷಣೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಯುವನಿಧಿ ಯೋಜನೆಯಡಿ ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವನ್ನು ಪರಿಶೀಲನೆಗಾಗಿ ಕೌಶಲ್ಯ ಸಂಪರ್ಕ ಪೋರ್ಟಲ್‌ಗೆ ಲಭ್ಯವಿರುವ ದತ್ತಾಂಶದೊಂದಿಗೆ ವರ್ಗಾಯಿಸಲಾಗುವುದು.

ಅಭ್ಯರ್ಥಿಯು ನಿರುದ್ಯೋಗಿಯಾಗಿರುವುದನ್ನು ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳ 25 ನೇ ತಾರೀಖು ಅಥವಾ ಅದಕ್ಕಿಂತ ಮೊದಲು ಆಧಾರ್ ಆಧಾರಿತ ಓಟಿಪಿ ಮೂಲಕ ಘೋಷಣೆ ಮಾಡತಕ್ಕದ್ದು. ಉದ್ಯೋಗ ದೊರಕಿದ ನಂತರ ಅಭ್ಯರ್ಥಿಯು ತಕ್ಷಣವೇ ಮುಚ್ಚಳಿಕೆ ಪತ್ರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಉದ್ಯೋಗ ಅಧಿಕಾರಿ ಕಿಶೋರ್ ಕುಮಾರ್, ಉದ್ಯೋಗ ಇಲಾಖೆ ಕೌನ್ಸ್‌ಲರ್‌ ಟ್ರೆನರ್ ಪಾಂಡುರಂಗಪ್ಪ.ಎಸ್ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ