ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಸ್ಪತ್ರೆ ಆವರಣದಲ್ಲಿ 114 ಕೋಟಿ ರು. ವೆಚ್ಚದಲ್ಲಿ 180 ಹಾಸಿಗೆಗಳ ಸುಸಜ್ಜಿತ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ 5 ಕೋಟಿ ರು. ವೆಚ್ಚದ ‘ಕ್ರಿಟಿಕಲ್ ಕೇರ್ ಬ್ಲಾಕ್’ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ಮೂರು ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಾದರಿಯಲ್ಲಿಯೇ 1.05 ಕೋಟಿ ರು. ವೆಚ್ಚದಲ್ಲಿ ‘ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬೊರೇಟರಿ’ ಸ್ಥಾಪಿಸಲಾಗಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಎಚ್‍ಡಿಎಫ್‍ಸಿ ಬ್ಯಾಂಕ್ ಸಿಎಸ್ಆರ್ ನಿಧಿಯಡಿ 100 ಫೌಲರ್ಸ್ ಕಾಟ್‍ಗಳು, ಬೆಡ್ ಸೈಡ್ ಲಾಕರ್‌ಗಳು, ತಲಾ 10 ಸಂಖ್ಯೆಯ ಸಿ-ಪ್ಯಾಪ್ ಯಂತ್ರಗಳು, ಮಾನಿಟರ್‌ಗಳು, ಇಸಿಜಿ ಯಂತ್ರಗಳು, ಬೇಬಿ ವಾರ್ಮರ್ ಹಾಗೂ ಫೋಟೋಥೆರಪಿ ಹಾಗೂ 28 ಲಕ್ಷ ರು. ಮೌಲ್ಯದ ತಲಾ ಎರಡು ಅತ್ಯಾಧುನಿಕ ಅರಿವಳಿಕೆ ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ನೀಡಿದೆ. ಶೀಘ್ರವೇ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದಾಗಿ ತಿಳಿಸಿದರು.30 ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಉಪಕರಣಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಲ್ಯಾಬ್‍ನಲ್ಲಿ ಒಂದೇ ಬಾರಿಗೆ 240 ರಿಂದ 400 ಟೆಸ್ಟ್ ಗಳನ್ನು ನಡೆಸಬಹುದು. ಕಿಡ್ನಿ, ಲಿವರ್ ಹಾಗೂ ಹೃದಯ ಸಂಬಂಧಿ ಪರೀಕ್ಷೆಗಳ ವರದಿಗಳು ಇನ್ನೂ ಮುಂದೆ ಅತ್ಯಂತ ವೇಗವಾಗಿ ರೋಗಿಗಳಿಗೆ ತಲುಪಿಸಲಾಗುವುದು. 50 ಲಕ್ಷ ರು. ವೆಚ್ಚದಲ್ಲಿ ಉದರದರ್ಶಕ (ಎಂಡೋಸ್ಕೋಪಿ) ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದು ಅನ್ನನಾಳ ಮತ್ತು ಗುದದ್ವಾರದ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಿದ್ದು, ಈಗಾಗಲೇ 112 ತಪಾಸಣೆಗಳನ್ನು ಮಾಡಲಾಗಿದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಮೆಮೊಗ್ರಫಿ ಸೌಲಭ್ಯವನ್ನು ಅಳವಡಿಸಲಾಗಿದೆ. ಹಲ್ಲಿನ ಚಿಕಿತ್ಸೆಗಾಗಿ 360 ಡಿಗ್ರಿಯಲ್ಲಿ ಚಿತ್ರೀಕರಿಸುವ ಅತ್ಯಾಧುನಿಕ ಒಪಿಜಿ ಎಕ್ಸ್-ರೇ ಯಂತ್ರವನ್ನು ರು.15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸೂಪರ್ ಸ್ಪೆಷಾಲಿಟಿ ತಜ್ಞರನ್ನು ವಾರಕ್ಕೊಮ್ಮೆ ಕರೆಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ನರರೋಗ ತಜ್ಞರು ಪ್ರತಿ ಶುಕ್ರವಾರ, ಹೃದ್ರೋಗ ತಜ್ಞರು ಪ್ರತಿ ಗುರುವಾರ, ಮೂತ್ರಪಿಂಡ ತಜ್ಞರು ಪ್ರತಿ ಶನಿವಾರ ಹಾಗೂ ಮಕ್ಕಳ ಹೃದ್ರೋಗ ತಜ್ಞರು ಪ್ರತಿ ತಿಂಗಳ ಮೊದಲ ಬುಧವಾರದಂದು ಲಭ್ಯವಿರುತ್ತಾರೆ. ಅಲ್ಲದೆ, ಕ್ಯಾನ್ಸರ್ ತಜ್ಞರು ವಾರಕ್ಕೆ ಮೂರು ದಿನ ಲಭ್ಯವಿದ್ದು ಶಸ್ತ್ರ ಚಿಕಿತ್ಸೆ ಹಾಗೂ ಕೀಮೋಥೆರಪಿ ಸಲಹೆಗಳನ್ನು ನೀಡುತ್ತಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ನಮ್ಮ ಪ್ರಮುಖ ಗುರಿ ಎಂದರು.