ಕನ್ನಡಪ್ರಭ ವಾರ್ತೆ ಚಳ್ಳಕೆರೆಕರ್ನಾಟಕದ ಮಧ್ಯಭಾಗದಲ್ಲಿರುವ ಚಿತ್ರದುರ್ಗ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ರಾಜ್ಯದ ಪ್ರಮುಖ್ಯ ಜಿಲ್ಲೆಯಲ್ಲಿ ಒಂದಾಗಿದೆ. ವಿಶೇಷವಾಗಿ ಕಾಡುಗೊಲ್ಲ, ಮ್ಯಾಸಬೇಡರು ಬುಡಕಟ್ಟು ಸಂಸ್ಕೃತಿಯ ಇತಿಹಾಸವನ್ನು ಪ್ರತಿಬಿಂಬಿಸುವ ಮಹಾನ್ ನಾಯಕರು. ಈ ಎರಡೂ ಸಮುದಾಯಗಳು ಬುಡಕಟ್ಟು ಸಂಸ್ಕೃತಿಗೆ ಮುಕುಟವಿಟ್ಟಂತೆ ಎಂದು ಖ್ಯಾತ ಚಿಂತಕ, ನಿವೃತ್ತ ಶಿಕ್ಷಕ ಕೋಡಪ್ಪ ತಿಳಿಸಿದರು.ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಭವನದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಸಮುದಾಯದ ಬಗ್ಗೆ ವಿಶೇಷ ಸಂಶೋಧನೆ ಮಾಡಿದ ಖ್ಯಾತ ಜಾನಪದ ಸಾಹಿತಿ ಮೀರಸಾಬಿಹಳ್ಳಿ ಶಿವಣ್ಣ, ಮ್ಯಾಸಬೇಡರ ಪಡೆಯ ಬಗ್ಗೆ ನಾಟಕ ಅಕಾಡೆಮೆಯ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ ಪರಿಶ್ರಮದಿಂದ ಸಂಶೋಧನೆ ನಡೆಸಿ ಈ ಸಮುದಾಯಗಳು ನಡೆಸಿಕೊಂಡು ಬಂದ ಆಚಾರ, ವಿಚಾರಗಳು ಹಾಗೂ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಇನ್ನೂ ಹೆಚ್ಚು ಆಸಕ್ತಿ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಗ್ರಾಮೀಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಹಾಗೂ ಖ್ಯಾತ ಲೇಖಕ ಬಿ.ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಎರಡೂ ಬುಡಕಟ್ಟು ಸಮುದಾಯಗಳು ನೂರಾರು ವರ್ಷಗಳಿಂದ ಅವರ ಪರಂಪರೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಸಫಲವಾಗಿವೆ. ಯಾವುದೇ ಆಧುನಿಕತೆಯ ಸ್ವರ್ಶ ವಿಲ್ಲದೆ ಗ್ರಾಮೀಣ ಭಾಷೆ, ಪರಿಸರದಲ್ಲೇ ಕಾಡುಗೊಲ್ಲರು ಹಾಗೂ ಮ್ಯಾಸಬೇಡರ ಪರಂಪರೆಯ ಬಗ್ಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ಧಾರೆ. ಈ ಎರಡೂ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅಧ್ಯಯನವಾಗಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ರಾಧಮ್ಮ ಮಾತನಾಡಿ, ಗ್ರಾಮದ ಗ್ರಾಮೀಣ ಪರಿಷತ್ ಕಳೆದ ಸುಮಾರು 40 ವರ್ಷಗಳಿಂದ ತನ್ನ ಕಾರ್ಯಚಟುವಟಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಾಹಿತ್ಯ ಮತ್ತು ಸಾಹಿತಿಗಳಿಗೆ ಗ್ರಾಮೀಣ ಸೊಗಡಿನ ಬಗ್ಗೆ ಹೆಚ್ಚು ಮಾಹಿತಿ ಪಡೆಯುತ್ತಾರೆ. ಗ್ರಾಮೀಣ ಸಾಹಿತ್ಯದಿಂದಲೇ ಇಂದು ಎಲ್ಲಾ ರೀತಿಯ ಸಾಹಿತ್ಯ ಪ್ರಾಕಾರಗಳನ್ನು ನಾವು ನೋಡಬಹುದಾಗಿದೆ. ಗ್ರಾಮೀಣ ಪರಿಷತ್ ಕಾರ್ಯ ಗ್ರಾಮದ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಂಜುನಾಥ, ದಳಪತಿ ಗೋವಿಂದಪ್ಪ, ರೈತ ಮುಖಂಡ ಶಿವಶಂಕರ ಮೂರ್ತಿ, ಎಂ.ಒ.ಬೋರಣ್ಣ, ರೂಪ, ಪಾಪಣ್ಣ, ಎಚ್.ತಿಪ್ಪೇಸ್ವಾಮಿ, ನರಸಿಂಹಪ್ಪ, ವಿಜಯಣ್ಣ, ಗುರುವಪ್ಪ ಮುಂತಾದವರು ಉಪಸ್ಥಿತರಿದ್ದರು.