ಅನಧಿಕೃತ ಶಾಲೆ, ವಸತಿ ಶಾಲೆಗಳ ರದ್ಧತಿಗೆ ಆಗ್ರಹ

KannadaprabhaNewsNetwork | Published : Jul 15, 2024 1:47 AM

ಸಾರಾಂಶ

ಶಹಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಅನಧಿಕೃತ ಶಾಲೆ ಹಾಗೂ ವಸತಿ ಶಾಲೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಸೇನೆ ವತಿಯಿಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನಲ್ಲಿ ಅನಧಿಕೃತ ಖಾಸಗಿ ಶಾಲೆ, ಕೋಚಿಂಗ್ ಸೆಂಟರ್ ಹಾಗೂ ವಸತಿ ಶಾಲೆ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸೇನೆ ತಾಲೂಕಾಧ್ಯಕ್ಷ ಸಿದ್ದು ಪಟ್ಟೇದಾರ ಅವರು, ತಾಲೂಕಿನಲ್ಲಿ ಅನೇಕ ಖಾಸಗಿ ಶಾಲೆಗಳು ಬಣ್ಣ ಬಣ್ಣದ ಬ್ಯಾನರ್, ಪೋಸ್ಟರ್ ಮೂಲಕ ಪಾಲಕರನ್ನು ಆಕರ್ಷಿಸಿ, ಅವರಿಂದ ಮನಬಂದಂತೆ ಹಣ ವಸೂಲಿಯನ್ನು ರಾಜರೋಷವಾಗಿ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್‌ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಬಿಗಿ ಕಾನೂನು, ನಿಯಮ ರೂಪಿಸಿದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ವರ್ಷದಿಂದ ವರ್ಷಕ್ಕೆ ನಿಗದಿತ ಶುಲ್ಕಕ್ಕಿಂತ ದುಪ್ಪಟ್ಟು ಹಣ ಪೋಷಕರಿಂದ ಸುಲಿಗೆ ಮಾಡುತ್ತಲೇ ಇವೆ. ಒಂದು ಮಗುವಿಗೆ ₹40 ರಿಂದ ₹60000 ದವರೆಗೂ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಯಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ. ತಕ್ಷಣ ತಾಲೂಕಿನಲ್ಲಿ ಅನುಮತಿ ಪಡೆಯದೆ ವಸತಿ ಶಾಲೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ತಕ್ಷಣ ವಸತಿ ಶಾಲೆಗಳನ್ನು ರದ್ದು ಪಡಿಸದಿದ್ದರೆ ಜಿಲ್ಲೆಯಲ್ಲಿ ಹೋರಾಟ ಕೈಗೊಂಡು, ನ್ಯಾಯಾಲಯದಲ್ಲಿ ಅಧಿಕಾರಿಗಳು ಮತ್ತು ಶಿಕ್ಷಣ ಸಂಸ್ಥೆಯ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇವಲ ಹಣದಾಸೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಸತಿ ಶಾಲೆಗಳನ್ನು ನಡೆಸುತ್ತಿವೆ. ಅಲ್ಲಿ ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಅಲ್ಲದೇ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಸುಮಾರು ವರ್ಷಗಳಿಂದ ವಸತಿ ಶಾಲೆಗಳು ನಡೆಯುತ್ತಿದ್ದರೂ ಮೌನವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Share this article