ಕನ್ನಡಪ್ರಭ ವಾರ್ತೆ ಧಾರವಾಡ
ಸಮಾಜದ ಕುಂದು-ಕೊರತೆಗಳನ್ನು ಸಮಾಜದ ಮುಖಂಡರು ಅರಿತುಕೊಳ್ಳಬೇಕು. ಸಂಘಟನೆಯ ಬಲದಿಂದ ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿ ತಿಳಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನದಲ್ಲಿ ಮಾತನಾಡಿದರು.ಸಮಾಜದ ಒಳಿತಿಗಾಗಿ ಯಾರೋ ಒಬ್ಬರು ಹೋರಾಟ ಮಾಡುವುದಲ್ಲ. ಎಲ್ಲರೂ ಕೈ ಜೋಡಿಸಬೇಕು ಅಂದಾಗ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ. ರಾಜಕೀಯ ಪ್ರಜ್ಞೆ ವಿದ್ಯಾರ್ಥಿಗಳಿಗೆ ಎಲ್ಲಿ ವರೆಗೆ ಬರುವುದಿಲ್ಲವೋ ಅಲ್ಲಿ ವರೆಗೆ ನಾವು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯವಿಲ್ಲ ಎಂದರು.
ಮೀಸಲಾತಿ ಎನ್ನುವುದು ಜಾತಿ ವ್ಯವಸ್ಥೆ ಅಥವಾ ಸ್ಥಾನ ಮಾನ ಗುರುತಿಸುವುದಿಲ್ಲ, ಯಾವ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಅದನ್ನು ಮೇಲೇತ್ತುವುದಾಗಿದೆ. ಆದರೆ, ವಿಶ್ವಕರ್ಮ ಸಮಾಜವನ್ನು ಮೀಸಲಾತಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಾವೆಲ್ಲರೂ ಹೋರಾಟ ಮಾಡಿ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಆಗ್ರಹ ಮಾಡಿದಾಗ ರಾಜಕೀಯ ವ್ಯವಸ್ಥೆ ಬದಲಾವಣೆಯಾಗಿದೆ. ವಿಶ್ವಕರ್ಮ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ನಮ್ಮ ಜಾತಿಗಳು ಇದ್ದರು ನಮಗೆ ಸೌಲಭ್ಯ ಸಿಕ್ಕಿಲ್ಲ ಎಂದರು.ನಾವು ಬ್ರಾಹ್ಮಣರು ಎಂಬ ತಪ್ಪು ಕಲ್ಪನೆ ಇರುವುದು ನಮ್ಮ ಮೀಸಲಾತಿ ಮೇಲೆ ಪ್ರಭಾವ ಬೀರಿದೆ. ವಿಶ್ವಕರ್ಮ ಐದು ಕುಲಕಸುಬು ಮಾಡುವ ಸಮಾಜ. ದೇಶದ ಅಭಿವೃದ್ಧಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ದೇಶದ ಇತಿಹಾಸದಲ್ಲಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಅದೇ ಸಮಾಜದ ಮಹಾಪೌರರಾಗಿರುವ ರಾಮಣ್ಣ ಬಡಿಗೇರ ಅವರಿಗೆ ಸನ್ಮಾನ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ. ಉತ್ತಮ ಕೆಲಸದ ಮೂಲಕ ತಮ್ಮ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ ಎಂದರು.ದಿವ್ಯ ಸಾನಿಧ್ಯವನ್ನು ಗಣೇಶ್ವರ ಸ್ವಾಮೀಜಿ ವಹಿಸಿದ್ದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಮಾಜದ ಹಿರಿಯರಾದ ಶಿವಣ್ಣ ಬಡಿಗೇರ, ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ ಇದ್ದರು.