ಚಿತ್ರದುರ್ಗ: ದಿಶಾ ಸಭೆಯಲ್ಲಿ ಹೆದ್ದಾರಿ ಸಂಚಾರ ಸಂಚಕಾರದ ಮಾರ್ದನಿ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿರುವುದರ ಬಗ್ಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀವ್ರ ಅಸಮಧಾನ ವ್ಯಕ್ತ. ಒಂದು ವರ್ಷದಲ್ಲಿ ಅಪಘಾತದಿಂದ 6 ಜನರು ಮೃತರಾಗಿದ್ದಾರೆಂದು ಎಸ್ಪಿ ಮಾಹಿತಿ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ಸಂಚಕಾರ ಉಂಟಾಗಿರುವುದರ ಬಗ್ಗೆ ಸೋಮವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ) ತೀವ್ರ ಕಳವಳ ವ್ಯಕ್ತಪಡಿಸಿತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳುವಂತೆ ಸೂಚಿಸಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಸ್ಪಿ ಧರ್ಮೇಂದ್ರ ಕುಮಾರ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಳಕಾಲ್ಮುರು ತಾಲೂಕು ಬಿ.ಜೆ ಕೆರೆ ಹಾಗೂ ತಳಕು ಹೋಬಳಿಯ ಗಿರಿಯಮ್ಮನಹಳ್ಳಿ, ಚಳ್ಳಕೆರೆಯ ಹೊಟ್ಟೆಪ್ಪನಹಳ್ಳಿ ಬಳಿ ಸ್ಥಳೀಯರು ರಸ್ತೆ ದಾಟಲು ಸೂಕ್ತ ಕೆಳಸೇತುವೆ ಇಲ್ಲದೇ ಸಂಕಷ್ಟ ಅನುಭಿಸುತ್ತಿದ್ದಾರೆ. ಬಿ.ಜಿ ಕೆರೆ ಬಳಿ ಕಳೆದ ಒಂದು ವರ್ಷದಲ್ಲಿ ಅಪಘಾತದಿಂದ 6 ಜನರು ಮೃತಪಟ್ಟಿದ್ದಾರೆ. ಅಪಘಾತವಾದಾಗ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟಿಸುವುದರಿಂದ, ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುತ್ತಿದೆ. 3 ಅಪಘಾತ ವಲಯಗಳಲ್ಲಿ ಸ್ಥಳೀಯರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರದಿಂದ ಸಮಸ್ಯೆ ಪರಿಹಾರಕ್ಕೆ ಹಾಗೂ ಅಪಘಾತ ತಡೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.

ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಗೌರವ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೆ ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಬಿ.ಜಿ ಕೆರೆ ಬಳಿ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು 2 ತಿಂಗಳ ಕಾಲಾವಕಾಶ ಬೇಕಾಗಿದೆ. ನಂತರ 4 ತಿಂಗಳ ಅವಧಿಯಲ್ಲಿ ಸೇತುವೆ ಅಳವಡಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅವಹಾಲುಗಳು ಪ್ರತಿನಿತ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿವೆ. ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸದುರ್ಗ-ಹೊಳಲ್ಕೆರೆ ಹಾಗೂ ಹಿರಿಯೂರು-ಹುಳಿಯಾರು ರಾಷ್ಟ್ರೀಯ ಹೆದ್ದಾರಿ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೆ ನಿಗದಿತ ಕಾಲಾವಧಿ ಮುಗಿದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವ ನಾರಾಯಣಸ್ವಾಮಿ ಕೂಡಲೆ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಜಾರಿಗೊಂಡಿರುವ ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 98 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅನುಮೋದನೆಗೊಂಡ ಅರ್ಹರಿಗೆ ಕೂಡಲೆ ತರಬೇತಿ ನೀಡುವ ಕಾರ್ಯ ಪ್ರಾರಂಭವಾಗಬೇಕು. ನಾನಾ ವೃತ್ತಿಗಳಲ್ಲಿ ತೊಡಗಿರುವ ಶ್ರಮಿಕ ವರ್ಗದವರು ತಮ್ಮ ವೃತ್ತಿ ಸುಧಾರಣೆಗೆ ಅಗತ್ಯವಿರುವ ಉಪಕರಣ ಖರೀದಿಸಲು ಆರ್ಥಿಕ ಸಹಾಯ ಸೌಲಭ್ಯ ಕಲ್ಪಿಸಬೇಕೆಂದರು.

ಜಿಲ್ಲಾಧಿಕಾರಿ ದಿವ್ಯಾಪ್ರಭು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸುಮಾರು 93 ಸಾವಿರ ಜನರು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದಂತೆಯೇ ಹೆಚ್ಚಿನವರಿದ್ದಾರೆ. ನೋಂದಣಿ ಮಾಡಿಕೊಂಡವರ ಪೈಕಿ 3 ಹಂತಗಳಲ್ಲಿ ಈಗಾಗಲೆ ಸುಮಾರು 16 ಸಾವಿರ ಫಲಾನುಭವಿಗಳಿಗೆ ಅನುಮೋದನೆ ನೀಡಿದ್ದು, ತರಬೇತಿಗಾಗಿಯೇ 19 ಏಜೆನ್ಸಿ ಗುರುತಿಸಲಾಗಿದೆ. ಒಂದು ಕೇಂದ್ರದಲ್ಲಿ ತರಬೇತಿ ಕೂಡ ಪ್ರಾರಂಭಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ 50 ತರಬೇತಿ ಕೇಂದ್ರ ಗುರುತಿಸಿ ವರದಿ ಸಲ್ಲಿಸುವಂತೆ ಸೂಚನೆ ಬಂದಿದ್ದು, ಗುರುತಿಸುವ ಕಾರ್ಯ ನಡೆದಿದೆ ಎಂದರು.

ಶೀಘ್ರ ಭೂಸ್ವಾಧೀನ ಪೂರ್ಣ:

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕು ವ್ಯಾಪ್ತಿಯ ಒಟ್ಟು 101 ಕಿ.ಮೀ ಮಾರ್ಗಕ್ಕಾಗಿ 1211.13 ಎಕರೆ ಭೂಮಿಗಾಗಿ ಬೇಡಿಕೆ ಸಲ್ಲಿಸಿದಂತೆ ಈಗಾಗಲೆ 639.09 ಎಕರೆ ಭೂಸ್ವಾಧೀನಕ್ಕಾಗಿ ಪರಿಹಾರ ವಿತರಿಸಲಾಗಿದೆ. ಉಳಿದಂತೆ 572.04 ಎಕರೆ ಭೂಸ್ವಾಧೀನ ವಿವಿಧ ಹಂತದಲ್ಲಿದೆ. ಭರಮಸಾಗರ-ಚೋಳಗಟ್ಟದವರೆಗೆ 36 ಕಿಮೀ ಪ್ರದೇಶದಲ್ಲಿ 281 ಎಕರೆ ಪ್ರದೇಶ ಈಗಾಗಲೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ್ದು, ಉಳಿದ 67.24 ಎಕರೆ ಜಮೀನು ಶೀಘ್ರ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಿಳಿಸಿದರು. ಈ ತಿಂಗಳ ಅಂತ್ಯದೊಳಗೆ ಶೇ. 90 ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತೆ ಸಚಿವರು ಸೂಚನೆ ನೀಡಿದರು.

ಜಿಪಂ ಸಿಇಒ ಸೋಮಶೇಖರ್, ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share this article