ಚಿತ್ರದುರ್ಗ: ಕೋಟೆ ನಾಡಿಗೆ ಎಂಟ್ರಿ ಕೊಟ್ಟ ಮಿಂಚೇರಿ ಯಾತ್ರೆ

KannadaprabhaNewsNetwork |  
Published : Dec 28, 2023, 01:45 AM ISTUpdated : Dec 28, 2023, 01:46 AM IST
ಮಿಂಚೇರಿ ಯಾತ್ರೆ ಚಿತ್ರದುರ್ಗ ನಗರ ಪ್ರವೇಶಿಸಿದಾಗ ಶಾಸಕ ಟಿ.ರಘುಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಚಕ್ಕಡಿ ಏರಿ ಮೆರವಣಿಗೆಯಲ್ಲಿ ಸಾಗಿದರು. | Kannada Prabha

ಸಾರಾಂಶ

ಚಿತ್ರದುರ್ಗದ ಪ್ರಮುಖ ಬೀದಿಯಲ್ಲಿ ಸಾಗಿದ ಸಾಲು ಚಕ್ಕಡಿಗಳು, ಶಾಸಕ ರಘುಮೂರ್ತಿ, ಕಾಂತರಾಜ್ ಜೊತೆಯಾಗಿ ಮೆರವಣಿಗೆಗೆ ಚಾಲನೆ. ಬಚ್ಚಬೋರನಹಟ್ಟಿ ಗ್ರಾಮದ ಆರಾಧ್ಯ ದೈವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಆರಾಧ್ಯ ದೈವ ಗಾದ್ರಿಪಾಲನಾಯಕ ಸ್ವಾಮಿಯ ಮಿಂಚೇರಿ ಯಾತ್ರೆ ಬುಧವಾರ ಮಧ್ಯಾಹ್ನ ಚಿತ್ರದುರ್ಗ ನಗರ ಪ್ರವೇಶಿಸಿತು. ರಾಷ್ಟ್ರೀಯ ಹೆದ್ದಾರಿ 4ರ ಹೋಟೆಲ್ ಬಿಗ್ ಬಾಸ್ ಸಮೀಪದಲ್ಲಿ ಮಿಂಚೇರಿ ಯಾತ್ರಾ ಮಹೋತ್ಸವವನ್ನು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಅದ್ಧೂರಿಯಾಗಿ ಬರ ಮಾಡಿಕೊಂಡು, ಪೂಜೆ ಸಲ್ಲಿಸಿ ನಂತರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಬಿಗ್ ಬಾಸ್ ಹೋಟೆಲ್ ಸಮೀಪದಿಂದ ಪ್ರಾರಂಭವಾದ ಸಾಲು-ಸಾಲು ಎತ್ತಿನ ಗಾಡಿಗಳ ಮೆರವಣಿಗೆ ರೈಲ್ವೆ ನಿಲ್ದಾಣ ತಿರುವು, ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ, ಗಾಂಧಿ ವೃತ್ತ, ಎಸ್‍ಬಿಐ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಸಾಗಿ, ಮೆಜೆಸ್ಟಿಕ್ ವೃತ್ತದಲ್ಲಿ ಇರುವ ಮದಕರಿ ನಾಯಕ ವೃತ್ತ ಪ್ರವೇಶಿಸಿತು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಕೆಳಗೋಟೆಯ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಬಚ್ಚಬೋರನಹಟ್ಟಿ ಗ್ರಾಮಕ್ಕೆ ಮೆರವಣೆಗೆ ಸಾಗಿತು.

ಮೆರವಣಿಗೆ ಮಾರ್ಗದುದ್ದಕ್ಕೂ ನಗರದ ಜನತೆ ಮಿಂಚೇರಿ ಯಾತ್ರೆಯ ಭಕ್ತಾದಿಗಳಿಗೆ ಮಜ್ಜಿಗೆ, ತಂಪು ಪಾನೀಯ, ಕುಡಿಯುವ ನೀರು, ಊಟ ಸೇರಿ ಇತರೆ ಸೌಲಭ್ಯ ನೀಡಿ ಸತ್ಕರಿಸಿದರು. ರಸ್ತೆಯ ಅಕ್ಕಪಕ್ಕ ಸಾವಿರಾರು ಮಂದಿ ನಿಂತು ಬುಡಕಟ್ಟು ವೈಭವ ವೀಕ್ಷಿಸಿ ಕಣ್ತುಂಬಿಕೊಂಡರು. ಯುವಕರು ಕುಣಿದು ಸಂಭ್ರಮಿಸಿದರು.

28ರಂದು ಬಚ್ಚಬೋರನಹಟ್ಟಿ ಕಕ್ಕಲಬೆಂಚುವಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಸಮೀಪದಲ್ಲಿನ ದೇವರ ಬಂಡೆ ಹಾಗೂ ಬಸವಣ್ಣನ ಬಾವಿ ಬಳಿ ಗಂಗಾಮಾತೆ ಪೂಜೆ ನೆರವೇರಲಿದೆ. ನಂತರ ಗಾದ್ರಿ ಪಾಲನಾಯಕ ಸ್ವಾಮಿ ಗುಡಿದುಂಬಿಸುವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ಉದ್ಯಮಿ ಅರುಣ್ ಕುಮಾರ್, ಸಮುದಾಯದ ಮುಖಂಡರಾದ ಯೋಗೇಶ್ ಬಾಬು, ಅಂಜಿನಪ್ಪ, ಸೂರಯ್ಯ ಸೇರಿ ಮತ್ತಿರರಿದ್ದರು.

ಈ ವೇಳೆ ಮಾತನಾಡಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ನಾಯಕ ಜನಾಂಗದ ಗಾದ್ರಿಪಾಲನಾಯಕ ಗೋ ಸಂರಕ್ಷಕ ಮತ್ತು ಹುಲಿಯೊಂದಿಗೆ ಕಾದಾಡುವ ಮೂಲಕ ಬುಡಕಟ್ಟು ವೀರರಾಗಿ ಹೊರಹೊಮ್ಮಿದ್ದಾರೆ. ಆಚಾರ ವಿಚಾರಗಳು, ಪದ್ಧತಿಗಳು ಭವಿಷ್ಯದ ಪೀಳಿಗೆಗೆ ಮಿಂಚೇರಿ ಅಂತಹ ಜಾತ್ರೆಗಳ ಮೂಲಕ ತಿಳಿಯುತ್ತವೆ. ಐದು ವರ್ಷಗಳಿಗೆ ಒಮ್ಮೆ ಮಿಂಚೇರಿ ಜಾತ್ರೆ ನಡೆಯಲಿರುವುದು ವಿಶೇಷವೆಂದರು.

ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಬುಡಕಟ್ಟು ವೀರನಾದ ಗಾದ್ರಿಪಾಲನಾಯಕ ನಮ್ಮ ಆರಾಧ್ಯ ದೈವನಾಗಿದ್ದಾನೆ. ಆರು ದಿನಗಳ ಕಾಲ ನಡೆಯುವ ಜಾತ್ರೆ ಪ್ರತಿಯೊಂದು ದಿನವು ವಿಶೇಷವಾಗಿರುತ್ತದೆ. ಇಂದು ಮಿಂಚೇರಿ ಯಾತ್ರೆ ಚಿತ್ರದುರ್ಗದ ರಾಜಬೀದಿಗಳಲ್ಲಿ ಸಾಗಿದ್ದು ಗಮನಾರ್ಹವೆಂದರು. ಸಮಾಜದ ಮುಖಂಡ ಸೂರನಾಯಕ್, ಯೋಗೇಶ್ ಬಾಬು, ಗೋಪಲಸ್ವಾಮಿನಾಯಕ್, ಕಾಟೀಹಳ್ಳಿ ಕರಿಯಪ್ಪ, ಸಾಗರ್, ವಿಜಯ್ ಕುಮಾರ್, ದರ್ಶನ್ ಇಂಗಳದಾಳ್, ಬಸವರಾಜ್ ಮತ್ತು ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಚಿತ್ರದುರ್ಗ: ಕೋಟೆ ನಾಡಿಗೆ ಎಂಟ್ರಿ ಕೊಟ್ಟ ಮಿಂಚೇರಿ ಯಾತ್ರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!