ಕುಂದಾಪುರ: ನವಪೀಳಿಗೆಗೆ ನಮ್ಮ ಪ್ರಾಚೀನ ಪಾರಂಪರಿಕ ಆಯುರ್ವೇದ ಪದ್ಧತಿ ಹಾಗೂ ನೈಸರ್ಗಿಕ ಗ್ರಾಮ ಜೀವನಶೈಲಿ ಪರಿಚಯಿಸುವ ಉದ್ದೇಶದೊಂದಿಗೆ, ಕರಾವಳಿ ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಚಿತ್ರಕೂಟ ಆಯುರ್ವೇದ ಹಬ್ಬ 2026 ಅ. 4ರಂದು ನಡೆಯಲಿದೆ. ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಲೋಗೋ ಅನಾವರಣ ನೆರವೇರಿತು.ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿ ಮಾತನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು, ಪ್ರಸ್ತುತ ಜೀವನ ಶೈಲಿಯಿಂದ ಯುವಜನತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಂಕಷ್ಟಗಳಿಗೆ ಕೇವಲ ಇಂಗ್ಲಿಷ್ ಹೆಸರುಗಳನ್ನು ಹುಡುಕಿ ಕಂಗಾಲಾಗುವ ಬದಲು, ನಮ್ಮ ನೆಲದ ಆಯುರ್ವೇದ, ಹಳ್ಳಿಯ ಸಹಜ ದಿನಚರಿಯಲ್ಲೇ ಪರಿಹಾರವಿದೆ. ಆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಬ್ಬ ಆಯೋಜಿಸಿದ್ದೇವೆ ಎಂದರು.ಆಯುರ್ವೇದ ಜಾಗೃತಿ ಅಭಿಯಾನ: ಯುವಪೀಳಿಗೆಯನ್ನು ಅವರದ್ದೇ ಭಾಷೆ ಹಾಗೂ ಮಾಧ್ಯಮಗಳ ಮೂಲಕ ತಲುಪಲು ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನದಡಿ ಹಲವು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಯುರ್ವೇದದ ಮಹತ್ವ ಮತ್ತು ಜೀವನಕ್ರಮ ಕುರಿತು ರೀಲ್ಸ್ ತಯಾರಿಸುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಒಟ್ಟು 75 ಸಾವಿರರು. ಬಹುಮಾನ (25 ಸಾವಿರ ರು. ನಗದು ಹಾಗೂ 50 ಸಾವಿರ ರು. ಮೌಲ್ಯದ ಪಂಚಕರ್ಮ ಚಿಕಿತ್ಸೆ) ಬಹುಮಾನಗಳನ್ನು ನೀಡಲಾಗುವುದು ಎಂದರು.ಸೆ.30ರಂದು ಈ ರೀಲ್ಸ್ ಸಲ್ಲಿಸಲು ಕೊನೆಯ ದಿನವಾಗಿದೆ. ಇದರೊಂದಿಗೆ ಅ. 4ರಂದು ಸ್ಥಳದಲ್ಲೇ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಮಕ್ಕಳಿಗೆ ಆಕರ್ಷಕ ನಗದು ಪುರಸ್ಕಾರ ಲಭಿಸಲಿದೆ. ಅಂದು ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಸಾಮಾಜಿಕ ಜಾಲತಾಣ ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ನೇರ ಸಂವಾದ ಕೂಡ ಜರುಗಲಿದೆ.ಹಳ್ಳಿಯಲ್ಲೊಂದು ದಿನ: ನಗರ ಪ್ರದೇಶದ ಜನರಿಗೆ ಭಾನುವಾರದ ರಜಾ ದಿನವನ್ನು ಕುಟುಂಬ ಸಮೇತರಾಗಿ ಹಳ್ಳಿಯ ವಾತಾವರಣದಲ್ಲಿ ಕಳೆಯಲು ಹಳ್ಳಿಯಲ್ಲೊಂದು ದಿನ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನುರಿತ ವೈದ್ಯರಿಂದ ನಾಡಿ ಪರೀಕ್ಷೆ ನಡೆಸಿ ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕ ಆಹಾರ ಶೈಲಿಯ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಗೋಶಾಲೆ ಭೇಟಿ ಹಾಗೂ ಗೋಮಾತೆಯ ಸಾಮೀಪ್ಯದ ಅನುಭವ, ರೋಗನಿರೋಧಕ ಕಷಾಯ ತಯಾರಿಸುವ ತರಬೇತಿ, ಗಿಡಮೂಲಿಕೆಗಳ ಪರಿಚಯ ನಡಿಗೆ ಇರಲಿದೆ. ಆಯುರ್ವೇದ ಆಹಾರ ಖಾದ್ಯಗಳು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಆಹಾರ ಮೇಳ-ಸಂತೆ ಮತ್ತು ಪಂಚಕರ್ಮ ವಿಧಾನಗಳ ಪರಿಚಯ ನಡೆಯಲಿದೆ.ಅ. 4ರಂದು ಆಲೂರಿನ ಚಿತ್ರಕೂಟ ಆಯುರ್ವೇದ ಕೇಂದ್ರದ 18 ಎಕರೆ ಹಸಿರು ಪರಿಸರದಲ್ಲಿ ನಡೆಯಲಿರುವ ಆಯುರ್ವೇದ ಹಬ್ಬಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವ್ಯವಸ್ಥೆಯ ದೃಷ್ಟಿಯಿಂದ ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ನೋಂದಣಿಗೆ 9187471578 ಸಂಪರ್ಕಿಸಬಹುದು.ಲೋಗೋ ಅನಾವರಣ: ರಘುರಾಮ ಶಾಸ್ತ್ರಿ ಮತ್ತು ಮಹಾಬಲ ಬಾಯರಿ ಲೋಗೋ ಅನಾವರಣ ಮಾಡಿದರು. ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ, ಉದಯ್ ಜಿ ಪೂಜಾರಿ, ಉದಯ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ರಾಜೇಶ್ ದೇವಾಡಿಗ, ಚಂದ್ರಶೇಖರ್ ಶೆಟ್ಟಿ, ರವಿರಾಜ್ ಶೆಟ್ಟಿ, ಪ್ರಭಾಕರ ಆಚಾರ್ಯ, ಕಲಾವತಿ ಬಾಯರಿ, ಡಾ. ಅನುಲೇಖಾ ಬಾಯರಿ ಇದ್ದರು.