ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ನಗರದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ವೇಳೆಯೇ ಇಲ್ಲಿನ ಸಿದ್ದಪ್ಪ ಕಂಬಳಿ ರಸ್ತೆಯ ಚಿಟಗುಪ್ಪಿ ಉದ್ಯಾನಕ್ಕೂ ಹೊಸರೂಪ ನೀಡುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ. ಮಕ್ಕಳಿಗೆ ಓಪನ್ ಜಿಮ್ ಸೇರಿ ವಿವಿಧ ರೀತಿಯ ಹೊಸ ಪರಿಕರ ಅಳವಡಿಸುವ ಮೂಲಕ ಪಾರ್ಕ್ ಕಂಗೊಳಿಸುವಂತೆ ಮಾಡಲು ಈಗಾಗಲೇ ಕಾಮಗಾರಿ ಆರಂಭವಾಗಿದೆ.ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೇ ತಿಂಗಳಲ್ಲಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಫ್ಲೈಓವರ್ ಕಾಮಗಾರಿ ನಡೆಯಲಿದ್ದು, ಹೀಗಾಗಿ, ರಸ್ತೆಗೆ ಬೇಕಾದ ಜಾಗ ಬಿಟ್ಟು ಉದ್ಯಾನದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ.
ಹು-ಧಾ ಮಹಾನಗರ ಪಾಲಿಕೆಯು ₹೮೦ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೩೪,೯೩೨ ಚದರ ಅಡಿ ವಿಸ್ತೀರ್ಣದಲ್ಲಿರುವ ಉದ್ಯಾನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ನೆಲಹಾಸು, ನಡಿಗೆ ಪಥ, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಆಟಿಕೆ ಸಾಮಗ್ರಿಗಳು, ಓಪನ್ ಜಿಮ್, ಜೋಕಾಲಿ ಅಳವಡಿಕೆ ಸೇರಿದಂತೆ ಇನ್ನಿತರ ಪರಿಕರ ಅಳವಡಿಸಲು ಉದ್ದೇಶಿಸಲಾಗಿದೆ.ಉದ್ಯಾನದ ಬಳಿ ಚಿಟಗುಪ್ಪಿ ಆಸ್ಪತ್ರೆ, ಮಹಾನಗರ ಪಾಲಿಕೆ ಕಚೇರಿ ಇದ್ದು, ಸಾರ್ವಜನಿಕರು, ರೋಗಿಗಳ ಸಂಬಂಧಿಕರು ಪಾರ್ಕಿಗೆ ಬಂದು ವಿಶ್ರಾಂತಿ ಪಡೆಯುತ್ತಾರೆ. ಅವರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಉದ್ಯಾನದ ಸುತ್ತ ಗ್ರಿಲ್ ಅಳವಡಿಕೆ, ನೀರಿನ ಕೊಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲದೆ ಶಿವಾಜಿ ಪ್ರತಿಮೆ ಸ್ಥಾಪನೆಗೂ ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಪಾಲಿಕೆಯ ಪಾಲಿಕೆ ನಿರ್ಲಕ್ಷ್ಯದಿಂದ ಉದ್ಯಾನ ಹಾಳುಕೊಂಪೆಯಂತಾಗಿತ್ತು. ಅಂದಗೆಟ್ಟಿದ್ದ ಪಾರ್ಕ್ ನೋಡಿ ಇಲ್ಲಿಗೆ ಬರುತ್ತಿದ್ದ ಜನ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಪಾಲಿಕೆ ಆಸಕ್ತಿ ವಹಿಸಿ ಹೊಸರೂಪ ನೀಡುವ ಕಾರ್ಯ ಮಾಡುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ಹೊಸ ಪರಿಕರಗಳ ಅಳವಡಿಸಿದ ನಂತರ ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಉದ್ಯಾನದ ಸೌಂದರ್ಯ ಕಾಪಾಡಬೇಕು ಎಂಬುದು ಸಾರ್ವಜಿನಿಕರ ಆಗ್ರಹವಾಗಿದೆ.ರೋಗಿಗಳಿಗೆ ವಿಶ್ರಾಂತಿ ತಾಣ: ಚಿಟಗುಪ್ಪಿ ಆಸ್ಪತ್ರೆಗೆ ಹೆಚ್ಚಾಗಿ, ಗರ್ಭಿಣಿಯರು, ಬಾಣಂತಿಯರು ಆಗಮಿಸುತ್ತಾರೆ. ಅವರ ಜತೆ ಬರುವ ಸಂಬಂಧಿಕರಿಗೆ ವೇಳೆ ಕಳೆಯಲು ಮತ್ತು ಊಟಕ್ಕೆ ಈ ಉದ್ಯಾನ ಸಹಕಾರಿಯಾಗಿದೆ. ಆದರೆ, ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಆದರೆ, ಈಗ ಇದಕ್ಕೆ ಹೊಸ ರೂಪ ನೀಡುತ್ತಿರುವ ಪಾಲಿಕೆ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಯಾನ ನಿರ್ವಹಣೆ ಕೊರತೆಯಿಂದ ಕಳೆ ಕಳೆದುಕೊಂಡಿತ್ತು. ಇದೀಗ ಇಲ್ಲಿ ಹೊಸದಾಗಿ ಕಾಮಗಾರಿ ಮಾಡುತ್ತಿದ್ದಾರೆ. ಈ ಕಾಮಗಾರಿ ಮುಗಿದ ಮೇಲೆ ಉತ್ತಮವಾಗಿ ನಿರ್ವಹಣೆ ಮಾಡಿದರೆ ಇಲ್ಲಿ ಬರುವವರಿಗೆ ಉತ್ತಮ ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ ಎಂದು ಚಿಟಗುಪ್ಪಿ ಆಸ್ಪತ್ರೆಗೆ ಬಂದಿದ್ದ ರೋಗಿಯ ಸಂಬಂಧಿ ಪ್ರಕಾಶ್ ಹೇಳಿದರು.ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅನುದಾನದಡಿ ಚಿಟಗುಪ್ಪಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಫ್ಲೈಓವರ್‌ಗೆ ಮಾರ್ಕ್ ಮಾಡಿದ ಜಾಗ ಬಿಟ್ಟು ಕಾಮಗಾರಿ ಆರಂಭಿಸಲಾಗಿದೆ. ಹೊಸ ಪರಿಕರ ಅಳವಡಿಸುವುದರಿಂದ ಚಿಟಗುಪ್ಪಿ ಆಸ್ಪತ್ರೆಗೆ ಬರುವ ರೋಗಿಗಳ ಸಿಬ್ಬಂದಿ ಮತ್ತು ಮಕ್ಕಳಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ. ₹80 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.