ಬೆಂಗಳೂರಿನಲ್ಲಿ ಕಾಲರಾ ಸ್ಫೋಟ ಭೀತಿ

KannadaprabhaNewsNetwork |  
Published : Apr 07, 2024, 01:47 AM ISTUpdated : Apr 07, 2024, 06:45 AM IST
ಕಾಲೆರಾ ಚಿಕಿತ್ಸೆ ಪಡೆಯುತ್ತಿರುವವರು | Kannada Prabha

ಸಾರಾಂಶ

ತೀವ್ರ ಅತಿಸಾರ ಭೇದಿ ಸಮಸ್ಯೆಯಿಂದ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) 47 ವಿದ್ಯಾರ್ಥಿನಿಯರ ಪೈಕಿ ಇಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ.

 ಬೆಂಗಳೂರು :  ತೀವ್ರ ಅತಿಸಾರ ಭೇದಿ ಸಮಸ್ಯೆಯಿಂದ ಅಸ್ವಸ್ಥರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) 47 ವಿದ್ಯಾರ್ಥಿನಿಯರ ಪೈಕಿ ಇಬ್ಬರಲ್ಲಿ ಕಾಲರಾ ಸೋಂಕು ದೃಢಪಟ್ಟಿದೆ.

ತನ್ಮೂಲಕ ಬೆಂಗಳೂರು ನಗರದಲ್ಲಿ ಕಾಲರಾ ಹರಡುತ್ತಿರುವುದು ಖಚಿತಪಟ್ಟಿದ್ದು, ಬಿಸಿಲ ಬೇಗೆ, ತೀವ್ರ ನೀರಿನ ಅಭಾವ ಎದುರಿಸುತ್ತಿರುವ ನಗರ ನಾಗರೀಕರಲ್ಲಿ ಹೊಸದಾಗಿ ಕಾಲರಾ ಹರಡುವ ಭೀತಿ ಶುರುವಾಗಿದೆ.

ಕಾಲರಾ ದೃಢಪಟ್ಟ ಬೆನ್ನಲ್ಲೇ ವಿದ್ಯಾರ್ಥಿನಿಲಯ ಹಾಗೂ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೌಶಿನ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿರ್ವಹಣೆ ಲೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯದ ವಾರ್ಡನ್‌ ಡಾ.ಅಖಿಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲು ಆದೇಶಿಸಿದ್ದಾರೆ.

ಇಬ್ಬರಿಗೆ ಕಾಲರಾ ದೃಢ:  ಅಸ್ವಸ್ಥರ ಮಾದರಿ ಸಂಗ್ರಹಿಸಿ ಹ್ಯಾಂಗಿಂಗ್ ಡ್ರಾಪ್ ವಿಧಾನ ಹಾಗೂ ಕಲ್ಚರ್ ಪರೀಕ್ಷೆಯಲ್ಲಿ ಕಾಲರಾ ಸೋಂಕಿಗೆ ಪರೀಕ್ಷೆ ಮಾಡಲಾಗಿದ್ದು, ಇಬ್ಬರಲ್ಲಿ ವಿಬ್ರಿಯೊ ಕಾಲರಾ (ಸೆರೋ ಟೈಪ್ ಒಗಾವಾ) ಪತ್ತೆಯಾಗಿದೆ. ಮತ್ತೊಬ್ಬ ರೋಗಿಗೆ ಹ್ಯಾಂಗಿಂಗ್‌ ಡ್ರಾಪ್‌ ವಿಧಾನದಲ್ಲಿ ಕಾಲರಾ ದೃಢಪಟ್ಟಿದ್ದು, ಸ್ಟೂಲ್‌ ಕಲ್ಚರ್‌ ವರದಿ ಇನ್ನೂ ಬರಬೇಕಿದೆ. ಸದ್ಯ ಈ ಮೂವರು ಟ್ರಾಮಾ ಕೇರ್ ಸೆಂಟರ್‌ನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ದಾಖಲಾಗಿದ್ದ 47 ಅಸ್ವಸ್ಥರಲ್ಲಿ ಆರು ಮಂದಿ ಚೇತರಿಸಿಕೊಂಡು ಶನಿವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 28 ಮಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ಎಚ್ ಬ್ಲಾಕ್‌ನಲ್ಲಿ, 9 ಮಂದಿಗೆ ಟ್ರಾಮ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್‌ನಲ್ಲಿ, ಒಬ್ಬರಿಗೆ ಎಂಪಿಬಿ ತೀವ್ರ ನಿಗಾ ಘಟಕದಲ್ಲಿ ಸೇರಿ ಒಟ್ಟು 41 ಮಂದಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆಯಲ್ಲಿ ಆ್ಯಂಟಿಬಯೋಟಿಕ್ಸ್ ಮತ್ತು ಐವಿ ಫ್ಲೂಯಿಡ್ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ. ಅಸ್ವಸ್ಥರ ಮಲದ ಮಾದರಿಯನ್ನು ಸ್ಟೂಲ್‌ ಕಲ್ಚರ್ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಇನ್ನೂ ಹಲವರ ವರದಿ ಬರಬೇಕಿದೆ ಬಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ತಿಳಿಸಿದ್ದಾರೆ.

ನೀರಿನ ಮಾದರಿಯಲ್ಲಿ ಕಾಲರಾ ನೆಗೆಟಿವ್:  ವಿದ್ಯಾರ್ಥಿನಿಲಯದ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕಾಲರಾ ದೃಢಪಟ್ಟಿರುವುದರಿಂದ ಹಾಸ್ಟೆಲ್‌ನಲ್ಲಿ ಪೂರೈಕೆಯಾಗುತ್ತಿದ್ದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಆದರೆ ವರದಿಯಲ್ಲಿ ಕಾಲರಾ ದೃಢಪಟ್ಟಿಲ್ಲ. ಕಲುಷಿತ ಆಹಾರ ಸೇವನೆಯಿಂದ ಆಗಿರುವ ಸಾಧ್ಯತೆಗಳಿರಬಹುದು ಎಂದು ಅಂದಾಜಿಸಲಾಗಿದೆ. ಬಾಲಕಿಯರ ಹಾಸ್ಟೆಲ್ ಅಡುಗೆ ಕೋಣೆಯನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿನಿಯರಿಗೆ ವಿಕ್ಟೋರಿಯಾ ಆಸ್ಪತ್ರೆಯ ಅಡುಗೆ ಮನೆಯಿಂದ ಆಹಾರ ಮತ್ತು ನೀರು ಪೂರೈಸಲಾಗುತ್ತಿದೆ ಎಂದು ಡಾ. ರಮೇಶ್‌ ಕೃಷ್ಣ ಮಾಹಿತಿ ನೀಡಿದ್ದಾರೆ.ಟೆಂಡರ್‌ 

ಪ್ರಸ್ತಾವನೆ ಸಲ್ಲಿಸಲು ಸೂಚನೆ: ಘಟನೆ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮಹಿಳಾ ಆರೋಗ್ಯದ ಅಧ್ಯಕ್ಷೆ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.

ಬಿಎಂಸಿಆರ್‌ಐ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳಲ್ಲಿ ಕೊರತೆ ಇರುವುದನ್ನು ಡೀನ್‌ ರಮೇಶ್‌ ಕೃಷ್ಣ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಈ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಗಾಂಧಿನಗರದ ಅರಮನೆ ರಸ್ತೆಯಲ್ಲಿ 65 ಕೋಟಿ ರು. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದರು. ಈ ವೇಳೆ ಶಾಖೆ ಪ್ರಧಾನ ಕಾರ್ಯದರ್ಶಿ, ಎಲ್ಲ ಹಾಸ್ಟೆಲ್‌ಗಳ ದುರಸ್ತಿ, ನವೀಕರಣ ಮತ್ತು ಮೇಲ್ದರ್ಜೆಗೇರಿಸಲು ಟೆಂಡರ್ ಕರೆಯಲು ತಕ್ಷಣದ ಅನುಮೋದನೆಗಾಗಿ ತುರ್ತಾಗಿ ಕಡತವನ್ನು ಸಲ್ಲಿಸಲು ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ