ದೊಡ್ಡಬಳ್ಳಾಪುರ: ಆಸಕ್ತಿಗೆ ಅನುಗುಣವಾದ ಆಯ್ಕೆಗಳು ನಮ್ಮ ಯಶಸ್ಸಿಗೆ ಪೂರಕವಾಗಿರುತ್ತವೆ. ಬಾಹ್ಯ ಒತ್ತಡಗಳಿಗೆ ಮಣಿದು ಆಸಕ್ತಿ ಇಲ್ಲದ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರೆ ನಿರೀಕ್ಷಿತ ಯಶಸ್ಸು ಅಸಾಧ್ಯ ಎಂದು ಮಣಿಪಾಲದ ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ.ಆರ್.ಪಿ.ಪೈ ತಿಳಿಸಿದರು
ದೊಡ್ಡಬಳ್ಳಾಪುರ: ಆಸಕ್ತಿಗೆ ಅನುಗುಣವಾದ ಆಯ್ಕೆಗಳು ನಮ್ಮ ಯಶಸ್ಸಿಗೆ ಪೂರಕವಾಗಿರುತ್ತವೆ. ಬಾಹ್ಯ ಒತ್ತಡಗಳಿಗೆ ಮಣಿದು ಆಸಕ್ತಿ ಇಲ್ಲದ ವಿಷಯಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರೆ ನಿರೀಕ್ಷಿತ ಯಶಸ್ಸು ಅಸಾಧ್ಯ ಎಂದು ಮಣಿಪಾಲದ ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ.ಆರ್.ಪಿ.ಪೈ ತಿಳಿಸಿದರು.
ಇಲ್ಲಿನ ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯ ಸೂರ್ಯ ಪದವಿ ಪೂರ್ವ ಕಾಲೇಜು, ಶ್ರೀರಾಮ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಬಹಳಷ್ಟು ಸಂದರ್ಭಗಳಲ್ಲಿ ಧನಾತ್ಮಕ ಆಲೋಚನೆಗಳಿಂದ ಸಾಧನೆಯ ಹಾದಿಯಲ್ಲಿ ನಡೆಯುವ ಕಾರ್ಯ ಸಹಜವಾಗಿ ನಡೆಯುತ್ತದೆ. ಆದರೆ ನಕಾರಾತ್ಮಕ ಆಲೋಚನೆಗಳನ್ನು ಬದಲಿಸಿ, ಜೀವನ ಪ್ರೀತಿಯನ್ನು ವೃದ್ದಿಸುವ ಆತ್ಮವಿಶ್ವಾಸವನ್ನು ಶಿಕ್ಷಣ ನೀಡಬೇಕು. ಸಂದಿಗ್ಧ ಸಂದರ್ಭಗಳಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಆತ್ಮವಿಶ್ವಾಸ ಇರಬೇಕು. ಸಮಯದ ಮೌಲ್ಯವನ್ನು ಅರಿತು ಪ್ರಜ್ಞಾಪೂರ್ವಕವಾಗಿ ಸದ್ಬಳಕೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ನಾವು ಸ್ಪೂರ್ತಿಯಾಗಿ ಸ್ವೀಕರಿಸುವ ವ್ಯಕ್ತಿ ಅಥವಾ ಘಟನಾವಳಿಗಳು ಕೆಲವೊಮ್ಮೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುತ್ತವೆ. ಈ ಹಂತದಲ್ಲಿ ಅನುಕರಣೆ ಸಲ್ಲದು ಎಂಬ ಭಾವನೆ ಸರಿಯಲ್ಲ. ಅನುಕರಣೆಯ ಮೂಲಕವೇ ಹಲವು ಸೃಜನಶೀಲ ಆಲೋಚನೆಗಳು ಸ್ವತಂತ್ರವಾಗಿ ಬೆಳೆಯುವುದುಂಟು. ಕ್ರೀಡೆ, ಸಾಹಿತ್ಯ, ಕಲಾ ಚಟುವಟಿಕೆಗಳ ಆಸಕ್ತಿಯನ್ನು ಕಾಲಾನುಕ್ರಮದಲ್ಲಿ ವೃದ್ದಿಸಿಕೊಳ್ಳುವುದರಿಂದ ಸಮಗ್ರ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ:
ವ್ಯಕ್ತಿತ್ವ ಮತ್ತು ನಾಯಕತ್ವದ ಗುಣಗಳು, ಅವುಗಳ ಮಹತ್ವ ಮತ್ತು ಮೌಲ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ವಿದ್ಯಾರ್ಥಿಗಳ ಆಸಕ್ತಿ, ಚಿಂತನೆಗಳನ್ನು ಪ್ರಭಾವಿಸುವ ಮೌಲ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಿದರು.
ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಅಧ್ಯಕ್ಷೆ ಎಲ್.ಎನ್.ವಸುಂಧರಾದೇವಿ, ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಸುಜ್ಞಾನ ದೀಪಿಕಾ ಜಂಟಿ ನಿರ್ದೇಶಕ ಮಂಜುನಾಥ್, ತಾ.ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಸೂರ್ಯ ಪಿಯು ಕಾಲೇಜು ಪ್ರಾಂಶುಪಾಲ ಶಶಾಂಕ್, ಶ್ರೀರಾಮ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ರಾಜಿಮೋಲ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ರೇಖಾ ವೆಂಕಟೇಶ್, ಖಜಾಂಚಿ ನಿಖಿಲಾ ಇತರರು ಉಪಸ್ಥಿತರಿದ್ದರು.
22ಕೆಡಿಬಿಪಿ1- ದೊಡ್ಡಬಳ್ಳಾಪುರದ ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಣಿಪಾಲದ ನಿವೃತ್ತ ವೈದ್ಯಕೀಯ ಪ್ರಾಧ್ಯಾಪಕ ಡಾ.ಆರ್.ಪಿ.ಪೈ ಮತ್ತಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.