ಬ್ಯಾಡಗಿ: ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಶ್ವವೇ ಹೆಮ್ಮೆಪಡುವಂತಹ ಪ್ರತಿಭಾವಂತರನ್ನು ಬೆಳಕಿಗೆ ತರುವಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಯಶಸ್ವಿಯಾಗಿವೆ ಅವರ ಪ್ರಯತ್ನ ನಿರಂತರವಾಗಿ ಸಾಗಲಿ ಶಾಸಕ ಬಸವರಾಜ ಶಿವಣ್ಣನವರ ಆಶಿಸಿದರು.
ಪಟ್ಟಣದ ಸೇಂಟ್ ಜಾನ್ ವಿಯೆನ್ನಾ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಶಿಕ್ಷಣ ವ್ಯವಸ್ಥೆ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ಅದು ವಿದ್ಯಾರ್ಥಿಗಳ ಏಳಿಗೆಗೆ ಅವಕಾಶ ನೀಡುವುದಿಲ್ಲ. ಮಕ್ಕಳಿಗೆ ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತಿಲ್ಲವೆಂಬ ಆರೋಪಗಳಿವೆ, ಅದಾಗ್ಯೂ ಸಹ ದೇಶದಲ್ಲಿ ಕಾನ್ವೆಂಟ್ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದ ಕ್ರಿಶ್ಚಿಯನ್ ಮಿಷನರಿಗಳು ಗುಣಮಟ್ಟದ ಶಿಕ್ಷಣ ಸೇರಿದಂತೆ ಶಿಸ್ತುಬದ್ಧ ಬದುಕಿಗೆ ಉತ್ತಮ ಅಡಿಪಾಯ ಹಾಕುತ್ತಿವೆ ಎಂದರು.ಪೇಪರ್ ರೂಪದಲ್ಲಿ ಪರೀಕ್ಷೆ:
ಪೇಪರ್‌ಗಳಲ್ಲಿ ಉತ್ತರ ಬರೆಯುವಂತಹ ಪದ್ಧತಿ ದೇಶದಲ್ಲಿದೆ, ಇದರಿಂದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶಗಳಿದ್ದು, ವಿದ್ಯಾರ್ಥಿಯ ನಿಜವಾದ ಬುದ್ಧಿಮತ್ತೆ ನಿರ್ಣಯಿಸಲು ಸಾಧ್ಯವಾಗುತ್ತಿಲ್ಲ, ವರ್ಷ ವಿಡೀ ಉತ್ತಮವಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಇಂತಹ ವ್ಯವಸ್ಥೆಗಳಲ್ಲಿ ಅನ್ಯಾಯವಾಗಲಿದ್ದು ಇದೊಂದು ಕಳಪೆ ದರ್ಜೆಯ ವ್ಯವಸ್ಥೆ ಎಂದು ದೇಶದ ಪರೀಕ್ಷಾ ಪದ್ಧತಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರೋಪಗಳಿವೆ, ಆದರೆ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಶಾಲೆಗಳು ಅತೀ ಹೆಚ್ಚು ತಾಂತ್ರಿಕತೆ ಬಳಸುತ್ತಿದ್ದು, ನೇರ ಪರೀಕ್ಷಾ ಪದ್ಧತಿ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ ಸಂಗತಿ ಎಂದರು.ಪುಸ್ತಕ ಜ್ಞಾನ ನೈಜ ಪ್ರಪಂಚಕ್ಕೆ ಅನ್ವಯಿಸುತ್ತಿಲ್ಲ:
ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬರಿಗೂ ಪುಸ್ತಕದ ಜ್ಞಾನದ ಅವಶ್ಯಕತೆಯಿದೆ, ಎಲ್ಲರೂ ಉತ್ತಮ ಅಂಕಗಳಿಗಾಗಿ ಬಡಿದಾಡುತ್ತಿದ್ದಾರೆ, ಪ್ರಾಯೋಗಿಕ ಜ್ಞಾನದ ಕೊರತೆಯಿಂದ ನೈಜ ಪ್ರಪಂಚದ ಅನುಭವಕ್ಕೆ ಪುಸ್ತಕದಲ್ಲಿನ ಯಾವುದೇ ಅಂಶಗಳು ಅನ್ವಯಿಸದಿರುವುದು ದುರಂತದ ಸಂಗತಿ ಎಂದರು.ಸೃಜನಶೀಲ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಬೇಕು:
ಅಧ್ಯಕ್ಷತೆ ವಹಿಸಿದ ರೆವೆರೆಂಡ್ ಫಾದರ್ ಫ್ರಾನ್ಸಿಸ್ ಡಿಸೋಜಾ ಮಾತನಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆ ಕೇವಲ ಸಿದ್ಧಾಂತದ ಮೇಲೆ ಹೆಚ್ಚು ಗಮನಹರಿಸುತ್ತಾ ಬಂದಿದೆ, ಶಾಲೆ ಮತ್ತು ಕಾಲೇಜುಗಳು ಶ್ರೇಯಾಂಕ ಮತ್ತು ಶ್ರೇಣಿಗಳ ಜತೆಗೆ ಮಕ್ಕಳ ವಿಶ್ಲೇಷಣಾತ್ಮಕ ಮತ್ತು ಸೃಜನಶೀಲ ಕೌಶಲ್ಯಗಳ ಮೇಲೆ ಕೇಂದ್ರಿಕರಿಸಬೇಕು, ಮಕ್ಕಳಲ್ಲಿ ಮನಃಪರಿವರ್ತನೆ ಆಗುವಂತಹ ವಾಸ್ತವ ಸಂಗತಿಗಳಿಗೆ ಹತ್ತಿರವಾದ ವಿಷಯಗಳನ್ನು ಕಲಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ ಎಂದರು.ವೇದಿಕೆಯಲ್ಲಿ ತಾಪಂ ಇಓ ಕೆ.ಎಂ. ಮಲ್ಲಿಕಾರ್ಜುನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರ, ರೆ.ಫಾ. ಫೆಲಿಕ್ಸ್ ಪಿಂಟೋ, ಜೋಸೆಫ್ ಬಾಲಯ್ಯ, ಬಿಆರ್‌ಸಿ ಸಮನ್ವಯಾಧಿಕಾರಿ ಎಂ.ಎಫ್. ಹುಳ್ಯಾಳ, ಸ್ನೇಹ ಸದನ ವ್ಯವಸ್ಥಾಪಕಿ ಎಫ್. ರೂಪಾ, ಆರೋಗ್ಯ ಸಹಾಯಕಿ ಅಚಲಾ,ನಿರ್ದೇಶಕಿ ಗ್ಲೋರಿಯಾ ತೆರೆಸಿಟಾ ಹಾಗೂ ಇನ್ನಿತರರಿದ್ದರು. ಸಿಸ್ಟರ್ ನಿರ್ಮಲಾ ಸ್ವಾಗತಿಸಿ ವಂದಿಸಿದರು.