ಚಿತ್ರದುರ್ಗ: ವಿಜ್ಞಾನ ತಂತ್ರಜ್ಞಾನದಲ್ಲಿ ಜಗತ್ತು ಬೆಳೆಯುತ್ತಿರುವುದರಿಂದ ಮಾಹಿತಿ, ಸಂವಹನ ಕೌಶಲ್ಯ, ತಂತ್ರಜ್ಞಾನ ಕಂಡುಕೊಳ್ಳದಿದ್ದರೆ ಉತ್ತಮ ಶಿಕ್ಷಕರುಗಳಾಗಲು ಸಾಧ್ಯವಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಬಿ.ಡಿ.ಕುಂಬಾರ ಹೇಳಿದರು.
ಶಿಕ್ಷಕರ ಜ್ಞಾನ ಸಂಪತ್ತಿಗಿಂತ ಮಿಗಿಲಾದುದು ಮತ್ತೊಂದಿಲ್ಲ. ಇತಿಹಾಸ ಓದಿ ಜ್ಞಾನ ಸಂಪತ್ತುಗಳಿಸಿದವರಿಂದ ಮಾತ್ರ ಇತಿಹಾಸ ಸೃಷ್ಟಿಸಬಹುದು. ಬಿಇಡಿ ಪಡೆದವರೆಲ್ಲಾ ಶಿಕ್ಷಕರಾಗಿಯೇ ಕೆಲಸ ಮಾಡಬೇಕೆಂದೇನಿಲ್ಲ. ಬೇರೆ ಬೇರೆ ವಿಭಾಗಗಳಲ್ಲಿ ವಿಪುಲ ಅವಕಾಶಗಳಿವೆ ಅದನ್ನು ಬಳಸಿಕೊಳ್ಳಬೇಕಷ್ಟೆ ಎಂದು ಹೇಳಿದರು.
ಪ್ರಾಧ್ಯಾಪಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೇರಿದರು. ಅದಕ್ಕಾಗಿ ಶಿಕ್ಷಕರು ದಿನನಿತ್ಯವೂ ಅವರನ್ನು ಸ್ಮರಿಸಬೇಕು. ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಶಿಕ್ಷಣ ಪಡೆದ ಸಂಸ್ಥೆ ಮರೆಯಬಾರದು. ಸರ್ಕಾರಿ ಕೆಲಸಕ್ಕಾಗಿಯೇ ಕಾಯುತ್ತ ಕುಳಿತರೆ ದಿನಗಳು ಕಳೆದು ಹೋಗುತ್ತದೆ. ಖಾಸಗಿಯಾಗಿ ಸಾಕಷ್ಟು ಅವಕಾಶಗಳಿವೆ. ವಿದೇಶಗಳಿಗೆ ಹೋದರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಧರ್ಮದ ತಳಹದಿಯಲ್ಲಿ ಶಿಕ್ಷಣ ಕೊಟ್ಟು ಸಂಸ್ಥೆ ಬೆಳೆಸುತ್ತಿದ್ದೇವೆ. ಶಿಕ್ಷಕರು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆಯಬೇಕು. ಶ್ರೇಷ್ಠ ಶಿಕ್ಷಕರಾದವರು ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು. ಸಮಾಜ ಕಲುಷಿತವಾಗಿ ಹೀನಾಯ ಸ್ಥಿತಿಯಲ್ಲಿದೆ. ಒಳ್ಳೆಯ ಅಂಕ ಪಡೆದು ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್ಆಆರ್‌ಎಸ್ ಬಿಇಡಿ ಕಾಲೇಜಿನ ಪ್ರಾಂಶುಪಾಲ ರವಿ ಮಾತನಾಡಿ, ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಸಮಸ್ಯೆ ಎದುರಿಸಬೇಕಾಗಿದೆ. ಅಂಕಗಳ ಆಧಾರಿತ ಪದವಿ ಜೊತೆ ಉತ್ತಮ ಸಂಸ್ಕಾರವಿರಬೇಕು. ಸಾಮಾಜಿಕ ಹೊಣೆಗಾರಿಕೆ, ಜವಾಬ್ದಾರಿ ಪ್ರಾಮಾಣಿಕ, ನಿಷ್ಠೆಯಿಂದ ನಿಭಾಯಿಸಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯ ಶಿವಕುಮಾರ್ ಎಚ್.ಎನ್.ವೇದಿಕೆಯಲ್ಲಿದ್ದರು.