ದಲಿತ ಸಮುದಾಯದೊಂದಿಗೆ ಕ್ರೈಸ್ತ ಧರ್ಮದ ತಳುಕು

KannadaprabhaNewsNetwork |  
Published : Sep 23, 2025, 01:03 AM IST
22ಎಚ್ಎಸ್ಎನ್20 :  | Kannada Prabha

ಸಾರಾಂಶ

ಒಳಮೀಸಲಾತಿಯ ಹಂಚಿಕೆಯನ್ನು ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಹೊರಟಿದ್ದು, ಪರಿಶಿಷ್ಟ ಜಾತಿಗಳೊಂದಿಗೆ ಕ್ರೈಸ್ತ ಎನ್ನುವ ಪದವನ್ನು ತಳುಕು ಹಾಕುತ್ತಿರುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸುವುದು ಸಂವಿಧಾನ ವಿರೋಧಿ. ಸಂವಿಧಾನದ ೩೪೧ನೇ ವಿಧಿಯ ವಿರುದ್ಧವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದಷ್ಟೇ ನಾಗಮೋಹನ್ ದಾಸ್ ಆಯೋಗವು ೧೫೦ ಕೋಟಿ ರುಪಾಯಿ ವೆಚ್ಚದಲ್ಲಿ ಸಮಗ್ರ ಸಮೀಕ್ಷೆ ನಡೆಸಿತ್ತು. ಇದೀಗ ಮತ್ತೆ ಸಮೀಕ್ಷೆ ನಡೆಸುವುದು ಅನಗತ್ಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಒಳಮೀಸಲಾತಿಯ ಹಂಚಿಕೆಯನ್ನು ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಹೊರಟಿದ್ದು, ಪರಿಶಿಷ್ಟ ಜಾತಿಗಳೊಂದಿಗೆ ಕ್ರೈಸ್ತ ಎನ್ನುವ ಪದವನ್ನು ತಳುಕು ಹಾಕುತ್ತಿರುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಳೆದ ಆಗಸ್ಟ್ ೨೩ರಂದು ಪತ್ರಿಕೆಗಳಲ್ಲಿ ಪ್ರಕಟಿಸಿದ ನಾಲ್ಕು ಪುಟಗಳ ಜಾಹೀರಾತಿನಲ್ಲಿ ೧,೪೦೦ ಜಾತಿಗಳ ಸಮೀಕ್ಷಾ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ೪೮ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿದ್ದು, ಅದರಲ್ಲಿ ೧೫ ಪರಿಶಿಷ್ಟ ಜಾತಿಗಳು ಹಾಗೂ ಒಂದು ಪರಿಶಿಷ್ಟ ಪಂಗಡ (ವಾಲ್ಮೀಕಿ ಕ್ರಿಶ್ಚಿಯನ್) ಸೇರಿರುವುದು ಗಂಭೀರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಹೋರಾಟಗಳು ತೀವ್ರಗೊಂಡ ನಂತರ ಆಯೋಗದ ಅಧ್ಯಕ್ಷರು ೩೩ ಹಿಂದೂ ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ತೆಗೆದಿದ್ದಾರೆಂದು ಘೋಷಿಸಿದರು. ಆದರೆ ಉಳಿದ ೧೩ ದಲಿತ ಕ್ರಿಶ್ಚಿಯನ್ ಜಾತಿಗಳ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡದಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ. “ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್ ಹಾಗೂ ವಾಲ್ಮೀಕಿ ಕ್ರಿಶ್ಚಿಯನ್ ಜಾತಿಗಳ ಕ್ರೈಸ್ತ ಟ್ಯಾಗ್ ತೆಗೆದ ಅಧಿಕೃತ ಪ್ರಕಟಣೆಯನ್ನು ಸರ್ಕಾರ ಕೂಡಲೇ ಹೊರಡಿಸಬೇಕು” ಎಂದು ಆಗ್ರಹಿಸಿದರು.ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸುವುದು ಸಂವಿಧಾನ ವಿರೋಧಿ. ಸಂವಿಧಾನದ ೩೪೧ನೇ ವಿಧಿಯ ವಿರುದ್ಧವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದಷ್ಟೇ ನಾಗಮೋಹನ್ ದಾಸ್ ಆಯೋಗವು ೧೫೦ ಕೋಟಿ ರುಪಾಯಿ ವೆಚ್ಚದಲ್ಲಿ ಸಮಗ್ರ ಸಮೀಕ್ಷೆ ನಡೆಸಿತ್ತು. ಇದೀಗ ಮತ್ತೆ ಸಮೀಕ್ಷೆ ನಡೆಸುವುದು ಅನಗತ್ಯ ಎಂದರು.ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಮುಂತಾದ ಪ್ರಬಲ ಜಾತಿಗಳನ್ನು ಹೊರತುಪಡಿಸಿ, ಹೊಲೆಯ, ಮಾದಿಗ, ಬಂಜಾರ ಕ್ರಿಶ್ಚಿಯನ್ ಮುಂತಾದ ಜಾತಿಗಳನ್ನು ಉಳಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಎಸ್ಸಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ಜಾತಿಗಳ ಸೇರ್ಪಡೆ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುತ್ತದೆ. ಸಮೀಕ್ಷೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿರುವ ಕ್ರೈಸ್ತ ಟ್ಯಾಗ್ ಹೊಂದಿದ ಪರಿಶಿಷ್ಟ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲಾ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿದು ಭಾರೀ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಎಸ್.ಡಿ. ಚಂದ್ರು, ಗಿರೀಶ್, ಚೇತನ್ ಇತರರು ಉಪಸ್ಥಿತರಿದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ