ಜಿಲ್ಲಾದ್ಯಂತ ಸಡಗರ ಸಂಭ್ರಮದ ಕ್ರಿಸ್‌ಮಸ್

KannadaprabhaNewsNetwork |  
Published : Dec 26, 2024, 01:04 AM IST
ಬೆಟಗೇರಿಯ ಚರ್ಚನಲ್ಲಿ ಕ್ರೈಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕ್ರಿಸ್ ಮಸ್ ಆಚರಿಸಿದರು.  | Kannada Prabha

ಸಾರಾಂಶ

ಬೆಳಗ್ಗೆ 5ರಿಂದ ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆಗಳು ನಡೆದವು. ಬೆಟಗೇರಿಯ ವುರ್ಥ ಮೆಮೊರಿಯಲ್ ಸಿಎಸ್‌ಐ ಚರ್ಚಿನಲ್ಲಿ ಪ್ರಾರ್ಥನೆ, ನೀತಿ ಸಂದೇಶ ಬೋಧನೆ ಮಾಡಿದರು.

ಗದಗ: ಜಿಲ್ಲಾದ್ಯಂತ ಬುಧವಾರ ಕ್ರಿಶ್ಚಿಯನ್‌ರ ಹಬ್ಬವಾದ ಕ್ರಿಸ್ ಮಸ್ ಅನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಅದರಲ್ಲಿಯೂ ಬೆಟಗೇರಿ ಭಾಗದಲ್ಲಿರುವ ವಿವಿಧ ಚರ್ಚ್‌ಗಳಲ್ಲಿ ವಿಶೇಷ ದೀಪಾಲಂಕಾರ ಮಾಡಿದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ರಸ್ತೆಗಳು ಝಗಮಗಿಸುತ್ತಿದ್ದವು.

ಬೆಟಗೇರಿ ಭಾಗದಲ್ಲಿರುವ ಬಾಷಲ್ ಮಿಶನ್, ಸಿಎಸ್‌ಐ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಹಾಗೂ ಹಾತಗೇರಿ ನಾಕಾ, ಮುಳಗುಂದ ನಾಕಾ ಕಳಸಾಪುರ ರಸ್ತೆಯ ಚರ್ಚ್‌ಗಳಲ್ಲಿ ಕಳೆದ ಒಂದು ವಾರದಿಂದ ಸಂಭ್ರಮ ಕಳೆಗಟ್ಟಿತ್ತು. ಮಂಗಳವಾರ ಮಧ್ಯರಾತ್ರಿಯಿಂದ ಬಾಲ ಯೇಸುವಿನ ಜನ್ಮದಿನ ಆಚರಿಸಲಾಯಿತು. ಕ್ರಿಸ್‌ಮಸ್ ಕೇಕ್‌ ಅನ್ನು ಪರಸ್ಪರ ವಿನಿಮಯ ಮಾಡಿಕೊಂಡರು.ವಿವಿಧ ಚರ್ಚ್‌ಗಳಲ್ಲಿ ಯೇಸು ಪ್ರಭುವಿನ ಜನ್ಮಸ್ಥಳದ, ಬಾಲ ಯೇಸುವಿನ ಮಾದರಿಗಳನ್ನು ನಿರ್ಮಿಸಲಾಗಿತ್ತು. ಯೇಸು ಪ್ರಭುವಿನ ನಾಮಸ್ಮರಣೆ ಹಾಗೂ ಭಕ್ತಿಗೀತೆಗಳನ್ನು ಹಾಡಿ ಯೇಸುವನ್ನು ಜಪಿಸಿದರು. ನಂತರ ಮನೆಗೆ ತೆರಳಿ ಹಬ್ಬದೂಟ ಮಾಡಿದರು.

ಬೆಳಗ್ಗೆ 5ರಿಂದ ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆಗಳು ನಡೆದವು. ಬೆಟಗೇರಿಯ ವುರ್ಥ ಮೆಮೊರಿಯಲ್ ಸಿಎಸ್‌ಐ ಚರ್ಚಿನಲ್ಲಿ ಪ್ರಾರ್ಥನೆ, ನೀತಿ ಸಂದೇಶ ಬೋಧನೆ ಮಾಡಿದರು. ವಿದ್ಯಾರ್ಥಿಗಳು ಯೇಸುವಿನ ಕುರಿತಾದ ಹಾಡುಗಳನ್ನು ಹಾಡಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿರುವ ಬಡವರಿಗೆ, ಅನಾಥರಿಗೆ ಮತ್ತು ಅಂಗವಿಕಲರಿಗೆ ಸಿಹಿ ಹಾಗೂ ಬಟ್ಟೆಗಳನ್ನು ವಿತರಿಸಿದ ಕೆಲವರು ಜನರು ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದರು.

ಸಂಭ್ರಮಾಚರಣೆ

ಹಬ್ಬದಂಗವಾಗಿ ಕ್ರೈಸ್ತ ಬಾಂಧವರು, ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದಾರು. ಮನೆಯಲ್ಲಿ ಹಾಗೂ ಬೇಕರಿಗಳಲ್ಲಿ ತಯಾರಿಸಿದ ವಿವಿಧ ಬಗೆಯ ಕೇಕ್‌ಗಳನ್ನು ಸಾರ್ವಜನಿಕರಿಗೂ ನೀಡಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಒಂದು ವರ್ಷದೊಳಗಿನ ಮಕ್ಕಳ ತಲೆ ಸವರಿ, ಮಗುವಿಗೆ ಯೇಸುವಿನ ಕರುಣಿಯಿರಲಿ ಎಂದು ಪ್ರಾರ್ಥಿಸುತ್ತ ಪಾದ್ರಿಗಳು ವಿಶೇಷ ಆಶೀರ್ವಚನ ನೀಡಿದ್ದು ವಿಶೇಷವಾಗಿ ಕಂಡು ಬಂದಿತು.

ಗಮನ ಸಳೆದ ದೀಪಾಲಂಕಾರ

ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಎಲ್ಲ ಚರ್ಚ್‌ಗಳು ವಿಶೇಷ ದೀಪದ ಅಲಂಕಾರದಿಂದ ಕಂಗೋಳಿಸುತ್ತಿದ್ದವು. ಬಣ್ಣ ಬಣ್ಣದ ಪೇಪರ್ ಹಾಗೂ ಕ್ರಿಸ್ ಮಸ್ ಟ್ರೀ ನಿರ್ಮಿಸಿ, ಹಬ್ಬಕ್ಕೆ ಪಾರಂಪರಿಕ ಸ್ಪರ್ಶ ನೀಡಲಾಗಿತ್ತು. ಇದು ದೇವರ ಬೆಳಕು ಎಂಬುದು ಕ್ರೈಸ್ತ ಸಮುದಾಯದ ನಂಬಿಕೆಯಾಗಿದೆ. ಅದರರೊಂದಿಗೆ ಮನೆ ಮುಂಭಾಗದಲ್ಲಿ ಆಕಾಶ ಬುಟ್ಟಿ ಹಾಗೂ ಗಿಡಮರಗಳು ಮತ್ತು ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ನೋಡುಗರನ್ನು ಸೆಳೆಯುವಂತಿತ್ತು. ಇದರೊಟ್ಟಿಗೆ ಮಕ್ಕಳು ಹಬ್ಬದ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಕ್ರಿಸ್‌ ಮಸ್ ಭಜನೆ ಹಾಡಿ, ಶುಭಾಶಯ ಕೋರುವುದು ವಿಶೇಷವಾಗಿರುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ