ಮಲ್ಪೆ ಸಿಎಸ್ಐ ಚರ್ಚಿನಲ್ಲಿ ಸ್ಮಸ್ ಸಂಭ್ರಮ ಕಾರ್ಯಕ್ರಮ
ಪರಸ್ಪರ ಸಂತೋಷವನ್ನು ಹಂಚಿ ಬಾಳುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವಾಗಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.ಅವರು ಶುಕ್ರವಾರ ಇಲ್ಲಿನ ತೊಟ್ಟಂನ ಸಮನ್ವಯ ಸರ್ವಧರ್ಮ ಸಮಿತಿ ಆಶ್ರಯದಲ್ಲಿ ಮಲ್ಪೆ ಸಿಎಸ್ಐ ಚರ್ಚಿನಲ್ಲಿ ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಪರಸ್ಪರ ಶುಭಾಶಯಗಳನ್ನು, ಸಿಹಿತಿಂಡಿಗಳನ್ನು ಹಂಚಿಕೊಂಡರೆ ಸಾಲದು, ಪರಸ್ಪರ ಸಹಬಾಳ್ವೆಯ ಜೀವನವನ್ನು ಬಾಳುವುದರೊಂದಿಗೆ ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಕರಣೆ ಮಾಡಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ. ಯೇಸು ಸ್ವಾಮಿ ನಮ್ಮ ನೆರೆಯವರ ಹೃದಯದಲ್ಲಿ ಜನಿಸಿದಾಗ ಹಬ್ಬಕ್ಕೆ ನಿಜವಾದ ಅರ್ಥ ನೀಡಿದಂತಾಗುತ್ತದೆ. ಪ್ರತಿಯೊಂದು ಧರ್ಮಗಳು ತನ್ನ ಅನುಯಾಯಿಗಳಿಗೆ ನೀಡುವ ಸಂದೇಶ ನಿನ್ನ ನೆರೆಯವರಿಗೆ ಒಳಿತನ್ನು ಮಾಡು. ಪ್ರತಿಯೊಂದು ಧರ್ಮವನ್ನು, ಪ್ರೀತಿಸಿ ಗೌರವಿಸಿ ಬಾಳುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಸೌಹಾರ್ಧ ಸಮಾಜವನ್ನು ಕಟ್ಟಲು ಕೈ ಜೋಡಿಸಬೇಕು ಎಂದರು.ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಎಲ್ಲ ಧರ್ಮಗಳ ಆಚರಣೆಯಲ್ಲಿ ಸಾಮ್ಯತೆಗಳಿದ್ದು, ಪ್ರತಿಯೊಬ್ಬರು ತಮ್ಮ ಧರ್ಮದ ನಂಬಿಕೆಯ ಮೇಲೆ ಪ್ರಾರ್ಥಿಸುವಾಗ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಮಾಡು ಎಂದು ಪ್ರಾರ್ಥಿಸುತ್ತಾರೆ. ನಮ್ಮ ನೆರೆಯವರಿಗೆ ಗೌರವಿಸಿ ನಡೆದಾಗ ಸೌಹಾರ್ದ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಿಎಸ್‌ಐ, ಯುಬಿಎಂ ಚರ್ಚ್ ಮಲ್ಪೆ, ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಕ್ರಿಸ್ಮಸ್ ಸಂಬಂಧಿತ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.