- ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ, ಕವಿಗೋಷ್ಠಿ, ಸನ್ಮಾನ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಚುಟುಕು ಸಾಹಿತ್ಯ ಪ್ರಕಾರವು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದೆ. ಚುಟುಕು ಸಾಹಿತ್ಯದಲ್ಲಿ 3ರಿಂದ 4 ಸಾಲಿನಲ್ಲಿ ಹಾಸ್ಯ, ಸ್ವಾರಸ್ಯ ಮತ್ತು ಜೀವನದ ಮೌಲ್ಯಗಳನ್ನು ಅಡಗಿಸಿ ಹೇಳುವ ಸಾಹಿತ್ಯವಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಶುಕ್ರವಾರ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ, ರಾಜ್ಯಮಟ್ಟದ ಕವಿಗೋಷ್ಠಿ, 100 ವರ್ಷ ಪೂರೈಸಿದ ಹಿರಿಯರಿಗೆ ಗೌರವ ಸಮರ್ಪಣೆ ಹಾಗೂ 60 ವರ್ಷ ವಿವಾಹ ದಾಂಪತ್ಯ ಪೂರೈಸಿದ ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಭಾಷೆ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಶೇ.90ರಷ್ಟು ಕನ್ನಡ ಭಾಷೆಯನ್ನು ಮಾತನಾಡುವ ಕಾಸರಗೋಡು ಇಂದು ಕೇರಳ ರಾಜ್ಯದ ಪಾಲಾಗಿ ಅಲ್ಲಿರುವ ಕನ್ನಡ ಶಾಲೆಗಳಲ್ಲಿ ಒತ್ತಾಯ ಪೂರಕವಾಗಿ ಮಲೆಯಾಳಿ ಭಾಷೆ ಕಲಿಸಲು ಅಲ್ಲಿನ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದರು.ಜೀವ ವೈವಿಧ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್ ಮಾತನಾಡಿ, ಸಾಹಿತ್ಯ- ಸಂಸ್ಕಾರ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಸಾಹಿತಿಗಳು, ಕವಿಗಳು ಈ ನಾಡಿನ ಸಂಸ್ಕಾರ, ಸಂಸ್ಕೃತಿಯ ಪ್ರತಿಬಿಂಬಗಳಾಗಿದ್ದಾರೆ ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಇಲ್ಲಿನ ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. 60 ವರ್ಷ ವಿವಾಹ ದಾಂಪತ್ಯ ಪೊರೈಸಿದ ದಂಪತಿಗಳನ್ನು ಮತ್ತು 100 ವರ್ಷ ಪೂರೈಸಿದ ಹಿರಿಯರನ್ನು ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಪುರಸಭೆ ಮಾಜಿ ಸದಸ್ಯ ಪಟ್ಲಿ ನಾಗರಾಜ್, ಕಮಲಾ ಹರೀಶ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ ತೆಲಗಿ, ಗೌರವ ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ, ತಾಲೂಕು ಅಧ್ಯಕ್ಷ ಗಂಗಾಧರಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಕೊಟ್ರೇಶ್ ಕೋರಿ, ತಾಲೂಕು ಕರವೇ ಅಧ್ಯಕ್ಷ ಮಲ್ಲಾ ನಾಯ್ಕ್, ಹಿರಿಯ ಸಾಹಿತಿ ಶರಣಪ್ಪ, ಹಿರೇಮಳಲಿ ನಾಗರಾಜ್, ಶಿಲ್ಪ ಮಂಜುನಾಥ್, ನವೀನ್ ಮೊದಲಾದವರು ಹಾಜರಿದ್ದರು.
- - --30ಕೆಸಿಎನ್‌ಜಿ1:
ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. ಹಾಲಸ್ವಾಮಿ ವಿರಕ್ತ ಮಠದ ಶ್ರೀ ಮತ್ತಿತರ ಗಣ್ಯರು ಇದ್ದಾರೆ.