- ಆರೋಪಿಯನ್ನು 6 ದಿನ ಸಿಐಡಿ ವಶಕ್ಕೆ ನೀಡಿದ ಕೋರ್ಟ್
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದೆ. ಹತ್ಯೆ ಮಾಡಿದ ಆರೋಪಿ ಫಯಾಜ್‌ನನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಬುಧವಾರ ಕೃತ್ಯ ನಡೆದ ಸ್ಥಳಕ್ಕೆ ಕರೆ ತಂದು ಮಹಜರು ಮಾಡಿದರು.ಇದಕ್ಕೂ ಮೊದಲು, ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಫಯಾಜ್‌ನನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಹುಬ್ಬಳ್ಳಿ ಜೆಎಂಎಫ್‌ಸಿ ಕೋರ್ಟ್‌ಗೆ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಫಯಾಜ್‌ನನ್ನು ಆರು ದಿನ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ನೀಡಿದೆ. ಬಳಿಕ ಸಿಐಡಿ ಅಧಿಕಾರಿಗಳು ಫಯಾಜ್‌ನನ್ನು ಧಾರವಾಡದ ಡಿಎಆರ್ ಮೈದಾನದ ಹತ್ತಿರ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದರು.
ನೇಹಾಳನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ ಆರೋಪಿ ಫಯಾಜ್ 5 ದಿನ ಮೊದಲೇ ಚಾಕು ಖರೀದಿಸಿದ್ದ. ನೇಹಾ ಜತೆ ಕೆಲ ವಾರಗಳಿಂದ ಸಂಪರ್ಕ ಕಡಿತಗೊಂಡಿದ್ದರಿಂದ ಹತಾಶನಾಗಿ ದ್ವೇಷ ಸಾಧಿಸುತ್ತಿದ್ದ. ಧಾರವಾಡದಲ್ಲಿ ಚಾಕು ಖರೀದಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.