ಕನ್ನಡಪ್ರಭ ವಾರ್ತೆ ಬೆಂಗಳೂರು:
ನಿರ್ದಿಷ್ಟ ಸಮುದಾಯದ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಎಸ್‌ಐಆರ್ ಬಳಕೆ ಮಾಡಿರುವ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಅದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್‌ನ ಮುಂದಿನ ಕ್ರಮಗಳ ಕುರಿತು ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರಮುಖವಾಗಿ, ಎಸ್‌ಐಆರ್ ಬಳಕೆ ಮಾಡಿಕೊಂಡು ಫಾರಂ 7 ಮೂಲಕ ನಿರ್ದಿಷ್ಟ ಸಮುದಾಯದ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರದ ಕುರಿತಂತೆ ಸುಧೀರ್ಘ ಚರ್ಚೆ ನಡೆಸಲಾಯಿತು. ಜತೆಗೆ ಅಕ್ರಮದ ಕುರಿತು ಸಂಪೂರ್ಣ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದ್ದು, ಯಾವ ವಿಧಾನದಲ್ಲಿ ಅದನ್ನು ಪಡೆಯಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.ಪ್ರತಿ ಜಿಲ್ಲೆಯಿಂದಲೂ ಬಿಎಲ್‌ಒಗಳಿಂದ ವರದಿ ತರಿಸಿಕೊಳ್ಳಬೇಕು. ಚುನಾವಣಾಧಿಕಾರಿಗಳಿಗೆ ಮತದಾರರ ಹೆಸರು ತೆಗೆಯಲು ಎಷ್ಟು ಫಾರಂ 7 ಸಲ್ಲಿಕೆಯಾಗಿವೆ. ಫಾರಂ 7 ಸಲ್ಲಿಸಿರುವವರ ಹಿನ್ನೆಲೆಯೇನು? ಯಾವ ಸಮುದಾಯಕ್ಕೆ ಸೇರಿದವರ ಫಾರಂ 7 ಸಲ್ಲಿಸಲಾಗಿದೆ ಎಂಬ ಮಾಹಿತಿಯುಳ್ಳ ವರದಿ ಪಡೆಯಬೇಕು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಬೇಕು. ಆ ಮಾಹಿತಿ ಕ್ರೋಢೀಕರಿಸಿ, ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಬೇಕು. ಆ ಮೂಲಕ ಮತದಾರರನ್ನು ಮತ ಹಕ್ಕಿನಿಂದ ವಂಚಿಸುವಂತೆ ಮಾಡಲು ಹೊರಟಿರುವವರು ಯಾರು? ಮತ್ತು ಈ ಅಕ್ರಮದ ಮೂಲ ಎಲ್ಲಿ ಎಂಬುದನ್ನು ಪತ್ತೆ ಮಾಡಲು ಸಿಐಡಿ ತನಿಖೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಹಾಗೂ ಆಯಾ ಜಿಲ್ಲೆಗಳಿಂದ ಸಂಸದರು, ಶಾಸಕರು ಮತ್ತು ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗಳು ವರ್ಚ್ಯುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು. ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಜಮೀರ್ ಅಹಮದ್ ಖಾನ್, ಪುಟ್ಟರಂಗಶೆಟ್ಟಿ, ಬಾಲಕೃಷ್ಣ, ಟಿ. ರಘುಮೂರ್ತಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರೆಕೆ ಸಿಎಂ ಗೃಹ ಕಚೇರಿಯಲ್ಲಿ ಉಪಸ್ಥಿತರಿದ್ದು ಸಭೆಯಲ್ಲಿ ಪಾಲ್ಗೊಂಡಿದ್ದರು.