ಚಿತ್ರರಂಗ ಶ್ರೀಮಂತ, ಗುಣಮಟ್ಟ ಬಡ : ಪ್ರಭಾಕರ್‌

KannadaprabhaNewsNetwork |  
Published : May 25, 2026, 02:00 AM IST
Sandalwood

ಸಾರಾಂಶ

ಹಣದ ಬಡತನ ಇದ್ದಾಗ ಗುಣಮಟ್ಟದಲ್ಲಿ ಅತ್ಯಂತ ಶ್ರೀಮಂತಿಕೆ ಇದ್ದ ಸಿನಿಮಾಗಳನ್ನು ಕೊಟ್ಟಿರುವ ಕನ್ನಡ ಚಿತ್ರರಂಗ ಈಗ ಹಣದ ಶ್ರೀಮಂತಿಕೆ ಇದ್ದರೂ, ಗುಣಮಟ್ಟದಲ್ಲಿ ಬಡವಾಗಿದೆ ಎಂದು ಮುಖ್ಯಮಂತ್ರಿ ಅವರ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.

 ಬೆಂಗಳೂರು :  ಹಣದ ಬಡತನ ಇದ್ದಾಗ ಗುಣಮಟ್ಟದಲ್ಲಿ ಅತ್ಯಂತ ಶ್ರೀಮಂತಿಕೆ ಇದ್ದ ಸಿನಿಮಾಗಳನ್ನು ಕೊಟ್ಟಿರುವ ಕನ್ನಡ ಚಿತ್ರರಂಗ ಈಗ ಹಣದ ಶ್ರೀಮಂತಿಕೆ ಇದ್ದರೂ, ಗುಣಮಟ್ಟದಲ್ಲಿ ಬಡವಾಗಿದೆ ಎಂದು ಮುಖ್ಯಮಂತ್ರಿ ಅವರ ಮಾಧ್ಯಮ‌ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ‘ಚಂದನವನ: ಅಂದು-ಇಂದು-ಮುಂದು’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನ ಪೂರೈಸಿರುವ ಚಂದನವನಕ್ಕೆ ಸತ್ತ್ವ ಮತ್ತು ಸಂಸ್ಕಾರದ ಜೊತೆಗೆ ಸಾಂಸ್ಕೃತಿಕವಾಗಿ ಆಳವಾದ ಬೇರುಗಳಿವೆ. ಆದರೆ, ಕನ್ನಡತನದ ಬೇರುಗಳಿಂದ ಕಳಚಿಕೊಂಡು ಬಡವಾಗಿದೆ. ಚಂದನವನ ತನ್ನ ಇತಿಹಾಸದಲ್ಲಿ ಎಂದೂ ಕೇವಲ ಮನೋರಂಜನೆಯ ಮಾಧ್ಯಮವಾಗಿರಲಿಲ್ಲ. ಬದಲಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳನ್ನು ಬಿಂಬಿಸುವ ಕನ್ನಡಿಯಾಗಿತ್ತು ಎಂದರು.

ಕನ್ನಡದ ಬದುಕನ್ನು ಕಟ್ಟುವ, ಕನ್ನಡದ ಸಂಸ್ಕೃತಿಯನ್ನು ರೂಪಿಸುವ ಮತ್ತು ಕನ್ನಡ ನೆಲದ ಮೌಲ್ಯವನ್ನು ನಿರ್ಧರಿಸುವ ಮೂಲಕ ಕನ್ನಡತನವನ್ನು ಕಟ್ಟಿ ನಿಲ್ಲಿಸುವ ಸಾಂಸ್ಕೃತಿಕ ಚಳವಳಿಯಾಗಿ ಕನ್ನಡ ಸಿನಿಮಾರಂಗ ಬೆಳೆದು ಬಂದಿದೆ. 70-80ರ ದಶಕದಲ್ಲಿ ಕಾರ್ಮಿಕ ಚಳವಳಿ ಜೋರಾಗಿದ್ದ ಹೊತ್ತಲ್ಲಿ ‘ಕಾರ್ಮಿಕ ಕಳ್ಳನಲ್ಲ’, ‘ಸರ್ವರ್ ಸೋಮಣ್ಣ’ ರೀತಿಯ ಹತ್ತಾರು ಸಿನಿಮಾಗಳು ಬಂದವು. ರೈತ ಹೋರಾಟ ಜೋರಾಗಿದ್ದ ವೇಳೆ ರೈತರ ಬದುಕು ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟಕ್ಕೆ ಕನ್ನಡಿ ಹಿಡಿಯುವ ಶಿವರಾಮ ಕಾರಂತರ ಕಾದಂಬರಿ ‘ಚೋಮನ ದುಡಿ’ಯಂತಹ ಸಿನಿಮಾಗಳು ಬಂದಿದ್ದವು ಕೃಷಿಯ ಘನತೆಯನ್ನು ಎತ್ತಿ ಹಿಡಿಯುವ ‘ಬಂಗಾರದ ಮನುಷ್ಯ’, ಬರಗಾಲ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಟ ಬಿಂಬಿಸುವ ‘ಬರ’ ಸಿನಿಮಾ 1982 ರಲ್ಲಿ ತೆರೆಗೆ ಬಂತು.ಹಳ್ಳಿಯ ಸಂಪತ್ತು ಮತ್ತು ಮಾರ್ಕೆಟ್ ಮಾಫಿಯಾ ವಿರುದ್ಧದ ಹೋರಾಟವನ್ನು‌ ‘ಯಜಮಾನ’ ಸಿನಿಮಾ ಅರ್ಥ ಮಾಡಿಸಿತು ಎಂದು ಅವರು ನೆನಪಿಸಿದರು.

ಮಚ್ಚಿನ ಹುಚ್ಚು:

ಯಾವುದೇ ಮೌಲ್ಯಗಳಿಲ್ಲದ ಮಚ್ಚಿನ ಹೀರೋಯಿಸಂ ನಂಬಿಕೊಂಡಿರುವ ಚಿತ್ರಗಳ ಸಂಖ್ಯೆ ಮಿತಿ ಮೀರುತ್ತಿವೆ. ಅಭಿರುಚಿ ಇಲ್ಲದ ದುಡ್ಡಿರುವ ನಿರ್ಮಾಪಕರು, ಅತಿಯಾಗುತ್ತಿರುವ ಹೊಸಬರ ಸಿನಿಮಾಗಳ ಅಬ್ಬರದಲ್ಲಿ ಅನುಭವಿಗಳಾಗಿರುವ ಹಳಬರಿಗೆ ಬಲವಂತದ ನಿವೃತ್ತಿ ನೀಡಲಾಗುತ್ತಿದೆ ಎಂದು ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.

ಕನ್ನಡದ ತಾಕತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿವೆ

ಕೆ.ಜಿ.ಎಫ್, ಕಾಂತಾರ, ಚಾರ್ಲಿ 777, ವಿಕ್ರಾಂತ್ ರೋಣ ಮುಂತಾದ ಚಿತ್ರಗಳು ಕನ್ನಡದ ತಾಕತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿವೆ. ನಮ್ಮ ಮಣ್ಣಿನ ಕಥೆಗಳು, ನಮ್ಮ ಆಚರಣೆಗಳು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆಯುತ್ತಿವೆ. ಪ್ಯಾನ್-ಇಂಡಿಯಾ ಸಿನಿಮಾ ಮಾಡುವ ಗೀಳಿನಲ್ಲಿ ನಮ್ಮ ಚಿತ್ರಗಳು ತಮ್ಮ ಕನ್ನಡತನ ಅಥವಾ ಪ್ರಾದೇಶಿಕ ಸೊಗಡನ್ನು ಕಳೆದುಕೊಳ್ಳಬಾರದು. ಕನ್ನಡ ಚಿತ್ರರಂಗಕ್ಕೆ ಹಳೆಯ ಹಿರಿಮೆಯ ಬಲವಿದೆ, ಇಂದಿನ ತಂತ್ರಜ್ಞಾನದ ವೇಗವಿದೆ. ಈ ಎರಡನ್ನೂ ಸಮತೋಲನದಲ್ಲಿ ತೆಗೆದುಕೊಂಡು ಹೋದರೆ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ ಎಂದು ಪ್ರಭಾಕರ್ ಹೇಳಿದರು.ವಾಣಿಜ್ಯ ಮಂಡಳಿ ಮುಂದಿಟ್ಟ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ ಎಂದು ಪ್ರಭಾಕರ್ ಭರವಸೆ ನೀಡಿದರು. ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮತ್ತು ನಟ ರಮೇಶ್ ಅರವಿಂದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇ20 ಪೆಟ್ರೋಲ್‌ನಿಂದ ಮೈಲೇಜ್‌ ತಗ್ಗಿದ ದೂರು ಬಂದಿಲ್ಲ
ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ವರದಿ