ಹುಬ್ಬಳ್ಳಿ: ಸಿನಿಮೀಯ ರೀತಿಯಲ್ಲಿ ನಡೆದ ಗುತ್ತಿಗೆದಾರನ ಅಪಹರಣ ಪ್ರಕರಣವನ್ನು 24 ಗಂಟೆಯೊಳಗೆ ಆರೋಪಿಗಳ ಕಾರನ್ನು ಬೆನ್ನತ್ತಿ (ಚೇಸಿಂಗ್) ಸಿನಿಮೀಯ ರೀತಿಯಲ್ಲೇ 10 ಆರೋಪಿಗಳನ್ನು ಬಂಧಿಸುವಲ್ಲಿ ಹು-ಧಾ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೂ 10 ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬುಧವಾರ ತೋಳನಕೆರೆ ಸಮೀಪದಲ್ಲಿ ಗುತ್ತಿಗೆದಾರ ಮೋಹನ್ ಚವ್ಹಾಣ ಅವರನ್ನು 20ಕ್ಕೂ ಹೆಚ್ಚು ಜನರ ತಂಡ ಅಪಹರಿಸಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಬಸಪ್ಪ ದಳವಾಯಿ ಸೇರಿದಂತೆ 20ಕ್ಕೂ ಅಧಿಕ ಜನರ ತಂಡವು ಮಾರಕಾಸ್ತ್ರಗಳಿಂದ ಮೋಹನ್ ಅವರ ಮೇಲೆ ಹಲ್ಲೆ ಮಾಡಿ ಸಿನಿಮೀಯ ರೀತಿಯಲ್ಲಿ ಕಾರೊಂದರಲ್ಲಿ ಅಪಹರಿಸಿತ್ತು. ಅಪಹರಣಕ್ಕೊಳಗಾದ ಗುತ್ತಿಗೆದಾರನ ಸಹೋದರ ಅರವಿಂದ ಚವ್ಹಾಣ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.ಅಪಹರಣದ ಮಾಹಿತಿ ದೊರೆಯುತ್ತಿದ್ದಂತೆ ನಗರದ ವಿಮಾನ ನಿಲ್ದಾಣದ ಬಳಿಯ ತಾರಿಹಾಳ ಬ್ರಿಡ್ಜ್ ಬಳಿ ಪೊಲೀಸರು ಆರೋಪಿಗಳ ಕಾರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರ ಮೇಲೆಯೇ ಕಾರನ್ನು ಹತ್ತಿಸಲು ಯತ್ನಿಸಿ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದರು.
ಬಳಿಕ ಆರೋಪಿಗಳ ಕಾರನ್ನು ಬೆನ್ನತ್ತಿದ ಪೊಲೀಸರು ಧಾರವಾಡದ ಕೆ.ಸಿ. ಪಾರ್ಕ್ ಬಳಿ ಧಾರವಾಡ ಗ್ರಾಮಾಂತರ ಪೊಲೀಸರು ಹಾಗೂ ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸರು ಕಾರನ್ನು ಅಡ್ಡಹಾಕಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ ಕೆಲವರನ್ನು ಬಂಧಿಸಿದ್ದಾರೆ. ಬಳಿಕ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮುರಗೋಡ ಬಳಿ ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರನನ್ನು ರಕ್ಷಿಸಿ ಆತನೊಂದಿಗೆ ಇದ್ದ ಅಪಹರಣಕಾರರನ್ನು ಬಂಧಿಸಲಾಗಿದೆ.ಈ ಘಟನೆಯಲ್ಲಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಹಾಗೂ ಆತನ ಸಹಚರರಾದ ಕೃಷ್ಣಪ್ಪ ಬಡಿಗೇರ, ಮಜೀದಸಾಬ್ ನದಾಫ, ರುದ್ರಪ್ಪ ಭಜಂತ್ರಿ, ಶಂಕರ ಹಿರೇಮೇತ್ರಿ, ನಜೀರ ಮಕಾಂದಾರ, ಹನುಮಂತ ಕಲ್ಲಕುಟರ, ಚನ್ನಪ್ಪ ಮನವಡ್ಡರ, ಶೇಖಪ್ಪ ಕಲ್ಲವಡ್ಡರ, ಭೀಮಪ್ಪ ಕಲ್ಲವಡ್ಡರ ಸೇರಿ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದರು.
ಅಪಹರಣಕ್ಕೆ ಕಾರಣವೇನು?: ಮೋಹನ ಚವ್ಹಾಣ ಗುತ್ತಿಗೆದಾರ. ಅವರು ಕೆಲಸ ಪಡೆದು ಉಪಗುತ್ತಿಗೆದಾರರಿಗೆ ನೀಡುತ್ತಿದ್ದರು. ಅವರ ಬಳಿ ಬೈಲಹೊಂಗಲದ ಬಸಪ್ಪ ದಳವಾಯಿ ಉಪಗುತ್ತಿಗೆ ಪಡೆದಿದ್ದ. ಆದರೆ ಕೆಲಸ ಆದರೂ ಬಸಪ್ಪನಿಗೆ ಹಣ ಬಂದಿರಲಿಲ್ಲವಂತೆ. ಹೀಗಾಗಿ ಚವ್ಹಾಣ ಅವರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಕಮಿಷನರ್ ತಿಳಿಸಿದ್ದಾರೆ.ಪ್ರಮುಖ ಆರೋಪಿ ಬಸಪ್ಪ ದಳವಾಯಿ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಈ ಅಪಹರಣದ ಹಿಂದೆ ಇನ್ನೂ 10ಕ್ಕೂ ಅಧಿಕ ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಅವರನ್ನೂ ಬಂಧಿಸುವುದಾಗಿ ಮಾಹಿತಿ ನೀಡಿದರು.