ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂವರನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ 1.1 ಕೋಟಿ ರು. ದರೋಡೆ ಮಾಡಿದ್ದ ಎಂಟು ಮಂದಿ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.ನರಸಿಂಹ (30), ಜೀವನ್ (28), ಕುಮಾರ್ (33), ವೆಂಕಟರಾಜು (32), ಕಿಶೋರ್ (32), ನಮನ್ (19), ರವಿಕಿರಣ್ (30) ಮತ್ತು ಚಂದ್ರು (34) ಬಂಧಿತರು. ಆರೋಪಿಗಳಿಂದ 1.1 ಕೋಟಿ ರು. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಜಿಗಣಿ, ಬೇಗೂರು ಮತ್ತು ಚಂದಾಪುರ ನಿವಾಸಿಗಳಾಗಿರುವ ಆರೋಪಿಗಳು ಸೆ.27ರಂದು ಸಂಜೆ ಸುಮಾರು 6 ಗಂಟೆಗೆ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಅಕ್ಷಯ ಪಾರ್ಕ್ ಬಳಿ ಮೋಟಾರಾಮು ದಂಪತಿ ಮತ್ತು ಹೇಮಂತ್ ಎಂಬುವರನ್ನು ಅಪಹರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಸಿಕ್ಕ ಮಾಹಿತಿ ಮೇರೆಗೆ ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹಣದ ಸಹಿತ ಆರೋಪಿಗಳನ್ನು ಬಂಧಿಸಿ, ಮೂವರೂ ಸಂತ್ರಸ್ತರನ್ನು ರಕ್ಷಿಸಿದ್ದಾರೆ.ಪ್ರಕರಣದ ವಿವರ:
ತುಮಕೂರು ಮೂಲದ ಅಡಿಕೆ ವ್ಯಾಪಾರಿ ಮೋಹನ್ ಇತ್ತೀಚೆಗೆ ಆನೇಕಲ್ ಭಾಗದಲ್ಲಿ ಆಸ್ತಿಯೊಂದನ್ನು 1.75 ಕೋಟಿ ರು.ಗೆ ಮಾರಾಟ ಮಾಡಿದ್ದರು. ಈ ಸಂಬಂಧ ಮೋಟಾರಾಮು ದಂಪತಿಯಿಂದ 1.10 ಕೋಟಿ ರು. ನಗದು ತೆಗೆದುಕೊಂಡು ಬರುವಂತೆ ತಮ್ಮ ಚಿಕ್ಕಪ್ಪನ ಮಗ ಹೇಮಂತ್‌ಗೆ ಸೂಚಿಸಿದ್ದರು. ಅದರಂತೆ ಹೇಮಂತ್ ಸೆ.27ರಂದು ಸಂಜೆ 6 ಗಂಟೆಗೆ ಕಾರಿನಲ್ಲಿ ಹುಳಿಮಾವು ಸಮೀಪದ ಅಕ್ಷಯನಗರದ ಅಕ್ಷಯ ಪಾರ್ಕ್ ಬಳಿಗೆ ಬಂದಿದ್ದರು. ಈ ವೇಳೆ ಹಣ ನೀಡಲು ಮತ್ತೊಂದು ಕಾರಿನಲ್ಲಿ ಮೋಟಾರಾಮು ದಂಪತಿ ಅಲ್ಲಿಗೆ ಬಂದಿದ್ದರು.ಬೆದರಿಸಿ ವಿಡಿಯೋ ಸೆರೆ:
ಈ ವೇಳೆ ಹೇಮಂತ್ ಮೋಟಾರಾಮು ಅವರ ಕಾರಿನ ಬಳಿ ತೆರಳಿ ಮೋಹನ್ ನಿಮ್ಮಿಂದ ಹಣ ಪಡೆದುಕೊಳ್ಳಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದು ಕೆಲ ಹೊತ್ತು ಗಮನಿಸಿದ್ದಾರೆ. ಬಳಿಕ ದ್ವಿಚಕ್ರ ವಾಹನದಿಂದ ಇಳಿದು ನೀವು ಯಾರು? ಕಾರಿನಿಂದ ಕೆಳಗೆ ಇಳಿಯಿರಿ? ನಿಮ್ಮನ್ನು ತಪಾಸಣೆ ಮಾಡಬೇಕು ಎಂದು ಬೆದರಿಸಿ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಇದನ್ನು ಹೇಮಂತ್ ಹಾಗೂ ಮೋಟಾರಾಮು ದಂಪತಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ.ಶೆಡ್‌ಗೆ ಎಳೆದೊಯ್ದು ಹಲ್ಲೆ
ಇದರಿಂದ ಆತಂಕಗೊಂಡ ಹೇಮಂತ್ ಹಾಗೂ ಮೋಟಾರಾಮು ದಂಪತಿ ತಕ್ಷಣ ಕಾರು ಹತ್ತಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಕಾರನ್ನು ಬೆನ್ನಟ್ಟಿ ಹಿಂದಿನಿಂದ ಡಿಕ್ಕಿ ಮಾಡಿದ್ದಾರೆ. ಬಳಿಕ ಮೋಟಾರಾಮು ಅವರು ಗಾಬರಿಗೊಂಡು ಕಾರನ್ನು ನಿರ್ಜನ ಪ್ರದೇಶದತ್ತ ಚಲಾಯಿಸಿದ್ದಾರೆ. ಅಲ್ಲಿಗೂ ಹಿಂಬಾಲಿಸಿ ಬಂದಿರುವ ಇಬ್ಬರು ಅಪರಿಚಿತರು, ಕಾರನ್ನು ಅಡ್ಡಗಟ್ಟಿದ್ದಾರೆ. ಅಷ್ಟರಲ್ಲಿ ಇತರ ಆರು ಮಂದಿ ಸಹಚರರು ಇವರನ್ನು ಕೂಡಿಕೊಂಡು ಕಾರನ್ನು ಸುತ್ತುವರೆದಿದ್ದಾರೆ. ಬಳಿಕ ಹೇಮಂತ್ ಹಾಗೂ ಮೋಟಾರಾಮು ದಂಪತಿಯನ್ನು ಸಮೀಪದ ಶೆಡ್‌ವೊಂದಕ್ಕೆ ಬಲವಂತವಾಗಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಮೂವರ ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ.10 ಲಕ್ಷ ರು.ಗೆ ಬೇಡಿಕೆ:
ಬಳಿಕ ಆರೋಪಿಗಳು ನಿಮ್ಮ ಬಳಿಯಿರುವ ಹಣದ ಪೈಕಿ 10 ಲಕ್ಷ ರು. ಕೊಡುವಂತೆ ಬೇಡಿಕೆ ಇರಿಸಿದ್ದಾರೆ. ಇಲ್ಲವಾದರೆ, ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬೇರಿಕೆ ಹಾಕಿದ್ದಾರೆ. ಆದರೂ ಹೇಮಂತ್ ಹಾಗೂ ಮೋಟಾರಾಮು ದಂಪತಿ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲ ಸಮಯದ ಬಳಿಕ ಹೇಮಂತ್ ಕೈಗೆ ಬೇರೊಂದು ಮೊಬೈಲ್ ಕೊಟ್ಟು ನಿನ್ನ ಮಾಲೀಕನಿಗೆ ಕರೆ ಮಾಡಿ 10 ಲಕ್ಷ ರು. ಕೊಡುವಂತೆ ಕೇಳು ಎಂದು ಬೆದರಿಸಿದ್ದಾರೆ. ಇದಕ್ಕೆ ಹೇಮಂತ್ ನಿರಾಕರಿಸಿದ್ದಾನೆ. ಬಳಿಕ ಆರೋಪಿಗಳು 1.1 ಕೋಟಿ ರು. ಹಣವನ್ನು ಕಿತ್ತುಕೊಂಡಿದ್ದಾರೆ.ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನಈ ಸಮಯದಲ್ಲಿ ಹುಳಿಮಾವು ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರಸ್ವಾಮಿ ಅವರು ಘಟನಾ ಸ್ಥಳದ ಅನತಿ ದೂರದ ಡಿಎಲ್‌ಎಫ್ ವೃತ್ತದ ಬಳಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಅಪಹರಣದ ಬಗ್ಗೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಸ್ಥಳದಲ್ಲೇ ಇದ್ದ ಸಿಬ್ಬಂದಿಯನ್ನು ಬಳಸಿಕೊಂಡು ನಾಕಾಬಂದಿ ಹಾಕಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶೆಡ್ ಮೇಲೆ ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆ ಮಾಡಿದ್ದ 1.1 ಕೋಟಿ ರು. ಜಪ್ತಿ ಮಾಡಿದ್ದು, ಹೇಮಂತ್ ಹಾಗೂ ಮೋಟಾರಾಮು ದಂಪತಿಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇಬ್ಬರಿಗೆ ಅಪರಾಧ ಹಿನ್ನೆಲೆ:
ಬಂಧಿತ ಎಂಟು ಮಂದಿ ಆರೋಪಿಗಳ ಪೈಕಿ ವೆಂಕಟರಾಜು ಮತ್ತು ಕಿಶೋರ್ ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ಇವರ ವಿರುದ್ಧ ಬೆಂಗಳೂರು ಗ್ರಾಮಾಂತರ ಭಾಗದ ಠಾಣೆಯಲ್ಲಿ ದರೋಡೆ ಹಾಗೂ ಕೊಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಉಳಿದ ಆರೋಪಿಗಳು ಸೆಕ್ಯೂರಿಟಿ ಗಾರ್ಡ್, ಸ್ವಿಗ್ಗಿ ಡೆಲಿವರಿ ಬಾಯ್ ಸೇರಿದಂತೆ ದಿನಗೂಲಿ ಕೆಲಸ ಮಾಡುತ್ತಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.ಪೊಲೀಸರ ತಂಡಕ್ಕೆ ಬಹುಮಾನ ಘೋಷಣೆಅಪಹರಣ ಹಾಗೂ ದರೋಡೆ ಬಗ್ಗೆ ಮಾಹಿತಿ ಸಿಕ್ಕು 20 ನಿಮಿಷದೊಳಗೆ ಕಾರ್ಯ ಪ್ರವೃತ್ತರಾಗಿ ಮಿಂಚಿನ ಕಾರ್ಯಾಚರಣೆ ನಡೆಸಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಶಂಸಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ 20 ಸಾವಿರ ರು. ರಿವಾರ್ಡ್ ಘೋಷಿಸಿದ್ದಾರೆ.