ಗದಗ: ಮಾ. 3ರಿಂದ ಸಿಐಟಿಯು ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯುನ ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರವು ಅನುಸರಿಸುವ ಆರ್ಥಿಕ ನೀತಿಗಳನ್ನೇ ರಾಜ್ಯದ ಕಾಂಗ್ರೆಸ್ ಸರ್ಕಾರವು ಬಹುತೇಕ ಅನುಸರಿಸುತ್ತಿದೆ. ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಜೋರು ದ್ವನಿಯಲ್ಲಿ ಮಾತಾಡುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ಆಗುತ್ತಿಲ್ಲ. ಈ ಎರಡೂ ಪಕ್ಷಗಳು ಬೇರೆ ಬೇರೆಯಾದರೂ ನೀತಿಗಳೆಲ್ಲ ಒಂದೇಯಾಗಿವೆ. ರಾಜ್ಯದ ಕಾಂಗ್ರೆಸ್ 2023ರ ವಿಧಾನ ಸಭಾ ಚುನಾವಣೆಗಳ ಸಂದರ್ಭದಲ್ಲಿ ಕನಿಷ್ಠ ವೇತನದ ವೈಜ್ಞಾನಿಕ ಪುನರ್‌ವಿಮರ್ಶೆ ಭರವಸೆ ನೀಡಲಾಗಿತ್ತು. ಆದರೆ ಆ ಬಗ್ಗೆ ಕ್ರಮವಹಿಸಿಲ್ಲ. ಬದಲಾಗಿ ಬಿಜೆಪಿ ಜಾರಿಗೊಳಿಸಿದ್ದ ಕೆಲಸದ ಅವಧಿಯನ್ನು ಹೆಚ್ಚಿಸುವ ಆದೇಶವನ್ನು ಹಿಂಪಡೆಯಲಿಲ್ಲ ಎಂದರು.
ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸಮಾಡಿಸಲು ಅವಕಾಶ ನೀಡುವ ಕಾನೂನು ತಿದ್ದುಪಡಿಗಳನ್ನು ವಾಪಸ್ ಪಡೆಯಲಿಲ್ಲ. ಹಮಾಲಿ, ಆಟೋ, ಮನೆಕೆಲಸ, ಬೀದಿಬದಿ ಮೊದಲಾದ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳ ಜಾರಿಗೆ ಅಗತ್ಯವಿರುವ ಅನುದಾನವನ್ನು ನೀಡಲಿಲ್ಲ. ಅಂಗನವಾಡಿ, ಬಿಸಿಯೂಟ ಮುಂತಾದ ಸರ್ಕಾರಿ ಯೋಜನೆಗಳಲ್ಲಿ ಕೆಲಸಮಾಡುವ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಯಾವುದೇ ಕ್ರಮವಹಿಸಲಿಲ್ಲ ಎಂದು ಟೀಕಿಸಿದರು.ಮುಂಬರುವ ಬಜೆಟ್‌ನಲ್ಲಿ ಅಸಂಘಟಿತ 23 ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ 500 ಕೋಟಿ ಹಣಕಾಸಿನ ನೆರವು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ, ಗ್ರಾಪಂ ನೌಕರರ ಬಸವರಾಜ ಮಂತೂರ, ಮೈಬೂಬಸಾಬ ಹವಾಲ್ದಾರ, ನಿವೇದಿತಾ ಸಂಶಿ, ಶೇಖವ್ವ ಮುಂತಾದವರು ಹಾಜರಿದ್ದರು.