ಗೋಡೌನ್ ಆದ ಸಿಐಟಿಬಿ ಛತ್ರ, ಪಾಳು ಬಿದ್ದ ನಾಲ್ವಡಿ ಸಮುದಾಯ ಭವನ..!

KannadaprabhaNewsNetwork |  
Published : Jul 11, 2025, 12:31 AM ISTUpdated : Jul 11, 2025, 12:32 AM IST
40 | Kannada Prabha

ಸಾರಾಂಶ

ಹೆಬ್ಬಾಳು ಬಡಾವಣೆ ಕಡು ಬಡವರು, ಮಧ್ಯಮವರ್ಗದವರು ವಾಸಿಸುವ ಬಡಾವಣೆಯಾಗಿದ್ದು, ಈ ಬಡಾವಣೆ ನಿರ್ಮಾಣದ ವೇಳೆ ಅಲ್ಲಿನ ಜನರ ಅನುಕೂಲಕ್ಕೆಂದೇ ಸಿಐಟಿಬಿ ವತಿಯಿಂದ ನಿರ್ಮಾಣವಾಗಿದ್ದ ಸಮುದಾಯ ಭವನ ಅಧಿಕಾರಿಗಳ ದುರುದ್ದೇಶದಿಂದ ಇಂದು ಗೋಡೌನ್ ಆಗಿ ಬದಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಳೆದ ಮೂರು ದಶಕಗಳಿಂದ ಜನಸಾಮಾನ್ಯರ, ಬಡ ಜನರ ಶುಭ ಕಾರ್ಯಗಳಿಗೆ ಅನುಕೂಲವಾಗಿದ್ದ ಸಿಐಟಿಬಿ ಸಮುದಾಯ ಭವನವನ್ನು ಇಂದು ಅಧಿಕಾರಿಗಳು ಗೋಡೌನ್ ಆಗಿ ಬದಲಾಯಿಸುವ ಮೂಲಕ ಸಾರ್ವಜನಿಕರು ಸೌಲಭ್ಯ ವಂಚಿತರಾಗುವಂತಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್‌ ದೂರಿದ್ದಾರೆ.

ಇದರ ಜತೆಗೆ 2017ರಲ್ಲಿ ಹೊಸದಾಗಿ ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮುದಾಯ ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ವ್ಯಕ್ತಿಗೆ ವರ್ಷಕ್ಕೆ 35 ಲಕ್ಷ ರು. ಗಳಿಗೆ ಬಾಡಿಗೆ ನೀಡುವ ಮೂಲಕ ಅದೂ ಕೂಡ ಬಡ, ಮಧ್ಯಮ ವರ್ಗದ ಜನರ ಕೈಗೆಟುಕದಂತೆ ಮಾಡಲಾಗಿದೆ. ಜನ ಸಾಮಾನ್ಯರ ಬಳಕೆಗೆಂದೇ ನಿರ್ಮಿಸಿದ ಎರಡೂ ಸಮುದಾಯ ಭವನಗಳು ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಬಳಕೆಯಾಗುತ್ತಿರುವುದು ನೋವಿನ ಸಂಗತಿ.

ಗೋಡೌನ್ ಆದ ಹಳೆಯ ಭವನ:

ಹೆಬ್ಬಾಳು ಬಡಾವಣೆ ಕಡು ಬಡವರು, ಮಧ್ಯಮವರ್ಗದವರು ವಾಸಿಸುವ ಬಡಾವಣೆಯಾಗಿದ್ದು, ಈ ಬಡಾವಣೆ ನಿರ್ಮಾಣದ ವೇಳೆ ಅಲ್ಲಿನ ಜನರ ಅನುಕೂಲಕ್ಕೆಂದೇ ಸಿಐಟಿಬಿ ವತಿಯಿಂದ ನಿರ್ಮಾಣವಾಗಿದ್ದ ಸಮುದಾಯ ಭವನ ಅಧಿಕಾರಿಗಳ ದುರುದ್ದೇಶದಿಂದ ಇಂದು ಗೋಡೌನ್ ಆಗಿ ಬದಲಾಗಿದೆ. ಪ್ರಾರಂಭದಲ್ಲಿ ಅತೀ ಕಡಿಮೆ ಬೆಲೆಗೆ ಜನರ ಕೈಗೆಟುಕುತ್ತಿದ್ದ ಸಮುದಾಯ ಭವನದ ಸಾವಿರಾರು ಜನರಿಗೆ ಅನುಕೂಲವಾಗಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಆ ಭವನ ಇದೀಗ ಹಳೆಯ ಸಾಮಗ್ರಿ ಇಡುವ, ಇವಿಎಂ ಯಂತ್ರಗಳನ್ನು ಇಡುವ ಗೋಡಾನ್ ಆಗಿ ಬದಲಾಗಿದ್ದು, ಸಾರ್ವಜನಿಕರು ಸೌಲಭ್ಯ ವಂಚಿತರಾಗುವಂತಾಗಿದೆ ಎಂದು ಅವರು ಆರೋಪಿದ್ದಾರೆ.

ಬಾಗಿಲು ಮುಚ್ಚಿದ ನಾಲ್ವಡಿ ಭವನ:

ಎಂಡಿಎನಿಂದ 2017ರಲ್ಲಿ ಉದ್ಘಾಟನೆಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮುದಾಯ ಭವನ ಕಳೆದ ಒಂದು ವರ್ಷದಿಂದ ಬಾಗಿಲು ಮುಚ್ಚಿದ್ದು, ಪಾಳು ಕೊಂಪೆಯಾಗಿ ಪರಿವರ್ತನೆಯಾಗುತ್ತಿದೆ. ಬಡ, ಮಧ್ಯಮ ಮರ್ಗದ ಅನುಕೂಲಕ್ಕೆಂದು ಸುಮಾರು 5 ಕೋಟಿ ರು. ವೆಚ್ಚದಲ್ಲಿ ಸಮುದಾಯ ಭವನವನ ನಿರ್ಮಿಸಿದ ಎಂಡಿಎ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಾರ್ಷಿಕ 35 ಲಕ್ಷ ರುಪಾಯಿಗಳಿಗೆ ಖಾಸಗಿಯವರಿಗೆ ವಹಿಸುವ ಮೂಲಕ ತನ್ನ ಹೊಣೆಗೇಡಿತನ ಪ್ರದರ್ಶಿಸಿತು. ನಿರ್ವಹಣೆ ಹೊಣೆಹೊತ್ತ ವ್ಯಕ್ತಿ ಒಂದು ದಿನಕ್ಕೆ 1,35,000 ರು. ಬಾಡಿಗೆ ವಿಧಿಸಿದರು. ಇದು ಮಾರುಕಟ್ಟೆ ದರವೇ ಆಗಿತ್ತು. ಯಾವ ಸಮುದಾಯ ಭವನ ಬಡ, ಮಧ್ಯಮ ವರ್ಗದ ಜನರ ತೆರಿಗೆ ಹಣದಲ್ಲಿ ನಿಮಣವಾಗಿತ್ತೋ ಆ ಸಮುದಾಯ ಭವನವೂ ಅವರಿಗೆ ಗಗನ ಕುಸುಮವಾಗಿತು. ಇಲ್ಲೂ ಕೂಡ ಅಧಿಕಾರಿಗಳು, ಜನಪ್ರತಿನಿಧಿಗಳ ಪಟ್ಟಭದ್ರ ಹಿತಾಸಕ್ತಿಗಳಿಂದ ಜನಸಾಮಾನ್ಯರು ಸೌಲಭ್ಯ ವಂಚಿತರಾಗುವಂತಾಯಿತು.

ಇದರ ಜತೆಗೆ ಕಳೆದ ಒಂದು ವರ್ಷದಿಂದ ಸಮುದಾಯ ಭವನ ಬಾಗಿಲು ಮುಚ್ಚಿದ್ದು, ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ನಿರ್ವಹಣೆಯ ಜವಾಬ್ದಾರಿ ಹೊತ್ತವರೂ ನಿರ್ವಹಿಸದೆ, ಎಂಡಿಎ (ಹಿಂದಿನ ಮುಡಾ) ಕೂಡ ನಿರ್ವಹಿಸದ ಹಿನ್ನೆಲೆ ಸಮುದಾಯ ಭವನ ಪಾಳುಕೊಂಪೆಯಾಗಿ ಪರಿವರ್ತಿತವಾಗುತ್ತಿದ್ದು, ಪುಂಡ ಪೋಕರ ತಾಣವಾಗುತ್ತಿದೆ. ಇದರೊಂದಿಗೆ ಸಾರ್ವಜನಿಕರ ಕೋಟ್ಯಂತರ ರು. ಪೋಲಾಗುವಂತಾಗಿದೆ.

ಸಾರ್ವಜನಿಕ ಬಳಕೆಗೆ ಮುಕ್ತವಾಗಲಿ:

ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರವಾಗಲೀ, ಪ್ರಾಧಿಕಾರಗಳಾಗಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಬಾರದು. ಸಾರ್ವಜನಿಕ ಸೇವೆ, ಸೌಲಭ್ಯವೇ ಅಲ್ಲಿ ಪ್ರಧಾನವಾಗಿರಬೇಕು.

ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು.

ಹಳೆಯ ಸಮುದಾಯ ಭವನದಲ್ಲಿರುವ ವಸ್ತುಗಳನ್ನು ತೆರವುಗೊಳಿಸಿ ಭವನವನ್ನು ಸ್ವಚ್ಛಗೊಳಿಸಿ ಶೀಘ್ರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಅದರ ಜತೆಗೆ ನಾಲ್ವಡಿ ಸಮುದಾಯ ಭವನದ ಖಾಸಗಿ ನಿರ್ವಹಣೆಯನ್ನು ರದ್ದುಗೊಳಿಸಿ ಎಂಡಿಎ ನೇರವಾಗಿ ನಿರ್ವಹಣೆ ಮಾಡಬೇಕು.

ಎರಡೂ ಸಮುದಾಯ ಭವನಗಳನ್ನು ಅದರ ಮೂಲ ಉದ್ದೇಶದಂತೆ ಅತೀ ಕಡಿಮೆ ಬೆಲೆಗೆ, ಅದರ ನಿರ್ವಹಣೆಯ ವೆಚ್ಚವನ್ನಷ್ಟೇ ಪಡೆದು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಬೇಕು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾಡಳಿತ ಶೀಘ್ರ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಸಮುದಾಯ ಭವನಗಳು ಜನಬಳಕೆಗೆ ಮುಕ್ತವಾಗದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕೆ.ವಿ.ಶ್ರೀಧರ್‌ ಎಚ್ಚರಿಕೆ ನೀಡಿದ್ದಾರೆ.

PREV