ಗುರು ಪೂರ್ಣಿಮಾ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರು ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಸ್ವರೂಪರೆಂದು ಭಾವಿಸುತ್ತಾರೆ. ಬದುಕು ಅರಳಿಸುವ, ಪಸರಿಸುವ ಮತ್ತು ದುಷ್ಟತನ ಅಳಿಸುವ ಶಕ್ತಿ ಗುರುವಿಗಿದೆ. ಅಜ್ಞಾನ ಕಳೆದು ಸುಜ್ಞಾನದ ಅರಿವು ತುಂಬುವವನೇ ನಿಜವಾದ ಗುರುವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಗುರು ಪೂರ್ಣಿಮಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಜ್ಞಾನ ನೀಡಿ ಸನ್ಮಾರ್ಗದಲ್ಲಿ ನಡೆಸುವವನೇ ಗುರು ಎಂಬ ನಂಬಿಕೆಯಿದೆ. ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾಸ್ತ್ರ ಸಾರುತ್ತದೆ.
ಆಷಾಢ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂತಲೂ ವ್ಯಾಸರು ಹುಣ್ಣಿಮೆಯಂದೇ ಜನ್ಮ ತಾಳಿರುವ ಕಾರಣ ವ್ಯಾಸ ಪೂರ್ಣಿಮಾ ಎಂತಲೂ ಕರೆಯುತ್ತಾರೆ. ಮುಂದೆ ಗುರಿ ಹಿಂದೆ ಒಬ್ಬ ಗುರುವಿನ ಕಾರುಣ್ಯ ಪ್ರತಿಯೊಬ್ಬರಿಗೂ ಬೇಕು. ಪಾಪ ಕಾರ್ಯಕ್ಕೆ ಮನಸ್ಸು ಹೋಗದಂತೆ ಪುಣ್ಯ ಕಾರ್ಯದಲ್ಲಿ ಮನಸ್ಸು ಬೆಳೆಯುವಂತೆ ಉತ್ತಮ ಸ್ಫೂರ್ತಿ ನೀಡಿ ಮುಕ್ತಿ ಮಾರ್ಗ ತೋರುವ ಗುರುವನ್ನು ಪಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಆಷಾಢ ಮಾಸದಲ್ಲಿ ಬರುವ ಗುರು ಪೂರ್ಣಿಮೆಯಂದು ಶಿವನು ಯೋಗ ವಿದ್ಯೆಯನ್ನು ಸಪ್ತ ಮಹರ್ಷಿಗಳಿಗೆ ಅರುಹಿ ಮೊದಲ ಗುರುವಾದನು ಎಂಬ ನಂಬಿಕೆಯಿದೆ. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲಬೇಡಿ ಎಂಬ ವಿವೇಕಾನಂದರ ವಾಣಿಯಂತೆ ಜಾಗೃತರಾಗಿ ಶ್ರೇಷ್ಠ ಗುರುವನ್ನು ಪಡೆದು ಭವ ಬಂಧನದಿಂದ ಮುಕ್ತರಾಗಬೇಕು ಎಂದರು.ಗುರು ಪೂರ್ಣಿಮಾ ಅಂಗವಾಗಿ ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು. ಪವಿತ್ರ ಸಮಾರಂಭದಲ್ಲಿ ಲಿಂಗದಹಳ್ಳಿ, ಮಳಲಿ, ಸಂಗೊಳ್ಳಿ, ಬಿಳಕಿ, ಬೇರುಗಂಡಿ, ನೆಗಳೂರು, ಕಾರ್ಜುವಳ್ಳಿ, ಮಳಖೇಡ, ದೊಡ್ಡಸಗರ, ಹುಡಗಿ, ಗುಂಡಪಲ್ಲಿ ಮಠಗಳ ಶಿವಾಚಾರ್ಯರು ಹಾಗೂ ಹುಬ್ಬಳ್ಳಿಯ ಆರ್.ಎಂ.ಹಿರೇಮಠ, ಸೋಲಾಪುರದ ರಾಜು, ನಾಂದೇಡದ ವಿನಾಯಕ, ಹೂವಿನಮಡಲು ಹಾಲಸ್ವಾಮಿ, ಶಿವಮೊಗ್ಗದ ಟಿ.ವಿ.ಶಿವಕುಮಾರ್, ಕೊಡಿಯಾಲ ಹೊಸಪೇಟೆ ಗಿರೀಶ್, ಚಿಕ್ಕಮಗಳೂರಿನ ಪ್ರಭುಲಿಂಗಶಾಸ್ತ್ರಿ ಸೇರಿದಂತೆ ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ಪಾದ ಪೂಜಾ ನೆರವೇರಿಸಿ ಆಶೀರ್ವಾದ ಪಡೆದರು. ೧೦ಬಿಹೆಚ್‌ಆರ್ ೩:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಗುರು ಪೌರ್ಣಿಮೆಯ ಅಂಗವಾಗಿ ಶ್ರೀಪೀಠಕ್ಕೆ ಆಗಮಿಸಿದ ನಾಡಿನ ಶಿವಾಚಾರ್ಯರು ಮತ್ತು ಸದ್ಭಕ್ತರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಮಾಡಿದರು.