ಮರಳು ದಂಧೆ ಹತೋಟಿಗೆ ಕಾಡಿನ ರಸ್ತೆ ಬಂದ್

KannadaprabhaNewsNetwork |  
Published : Jul 11, 2025, 12:31 AM IST
ಖಾನಾಪುರ ತಾಲೂಕಿನ ಶೇಡೇಗಾಳಿ ಗ್ರಾಮದ ಬಳಿ ಅರಣ್ಯ ಇಲಾಖೆಗೆ ಸೇರಿದ ರಸ್ತೆಯಲ್ಲಿ ಕಂದಕ ನಿರ್ಮಿಸಲಾಗಿದೆ. | Kannada Prabha

ಸಾರಾಂಶ

ತಾಲೂಕಿನ ಅರಣ್ಯ ಪ್ರದೇಶ ಮತ್ತು ಜಲಮೂಲಗಳ ಬಳಿ ಅವ್ಯಾಹತವಾಗಿ ನಡೆದಿರುವ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಅರಣ್ಯದೊಳಗೆ ಸಾಗುವ ಸಂಪರ್ಕ ರಸ್ತೆಗಳಿಗೆ ಅಡ್ಡಲಾಗಿ ಕಂದಕಗಳನ್ನು ನಿರ್ಮಿಸಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಅರಣ್ಯ ಪ್ರದೇಶ ಮತ್ತು ಜಲಮೂಲಗಳ ಬಳಿ ಅವ್ಯಾಹತವಾಗಿ ನಡೆದಿರುವ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಅರಣ್ಯದೊಳಗೆ ಸಾಗುವ ಸಂಪರ್ಕ ರಸ್ತೆಗಳಿಗೆ ಅಡ್ಡಲಾಗಿ ಕಂದಕಗಳನ್ನು ನಿರ್ಮಿಸಿದೆ.

ಪಟ್ಟಣದ ಹೊರವಲಯದ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯಿಂದ ಅರಣ್ಯ ಪ್ರದೇಶವನ್ನು ಸೀಳಿಕೊಂಡು ಹೋಗಿರುವ ರಸ್ತೆಗಳ ಮೂಲಕ ಮರಳು ಲಾರಿಗಳು ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಮರಳು ಸಾಗಿಸುವ ಲಾರಿಗಳು ಸಾಗದಂತೆ ರಸ್ತೆ ತಡೆಗಳನ್ನು ನಿರ್ಮಿಸಿದ್ದಾರೆ.ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೃಷಿ ಜಮೀನುಗಳಲ್ಲಿ ಅಕ್ರಮ ಮರಳು ದಂಧೆ ನಡೆದಿರುವ ಬಗ್ಗೆ ತಾಲೂಕಿನ ಶೇಡೆಗಾಳಿ ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆದು ಕ್ರಮಕ್ಕೆ ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಶೇಡೆಗಾಳಿ, ಹರೂರಿ, ಮಂತುರ್ಗಾ ಹಾಗೂ ಅಕ್ಕಪಕ್ಕದ ಭಾಗದ ಅರಣ್ಯ ಪ್ರದೇಶದಲ್ಲಿ ಮರಳು ತುಂಬಿದ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳು ಸಾಗುವ ದಾರಿಗಳಲ್ಲಿ ಕಂದಕಗಳನ್ನು ನಿರ್ಮಿಸಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಅವರವರ ಹೊಲಗಳಿಗೆ ಹೋಗುವ ಹಾದಿ ಬಂದ್ ಆಗಿ ತೊಂದರೆ ಉಂಟಾಗುತ್ತಿದ್ದರೂ ಮರಳು ದಂಧೆ ನಿಗ್ರಹಕ್ಕೆ ಇಲಾಖೆಯ ಈ ಕ್ರಮ ಅನಿವಾರ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ

ತಾಲೂಕಿನ ರುಮೇವಾಡಿ, ಹೊಣಕಲ್, ಹರೂರಿ, ಮಂತುರ್ಗಾ ಹಾಗೂ ಶೇಡೇಗಾಳಿ ಗ್ರಾಮಗಳ ವ್ಯಾಪ್ತಿಯ ಅಲಾತ್ರಿ ಹಳ್ಳ ಮತ್ತು ಮಲಪ್ರಭಾ ನದಿ ಸಂಗಮಿಸುವ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆಯಿಂದ ಕೃಷಿ ಜಮೀನುಗಳು ಮತ್ತು ಜಲಮೂಲಗಳೂ ಕಲುಷಿತಗೊಳ್ಳುತ್ತಿವೆ. ಇಲ್ಲಿ ನಡೆದಿರುವ ಮರಳು ದಂಧೆಯ ಬಗ್ಗೆ ಪೊಲೀಸ್ ಇಲಾಖೆ ಮತ್ತು ತಹಸೀಲ್ದಾರರಿಗೆ ಸ್ಥಳೀಯರು ದಾಖಲೆ ಸಮೇತ ಮಾಹಿತಿ ನೀಡಿದ್ದರೂ ಅವರು ಮರಳು ದಂಧೆಕೋರರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ರಾಜಕೀಯ ಒತ್ತಡಕ್ಕೆ ಹೆದರಿ ಈ ಅಕ್ರಮ ದಂಧೆಯ ಬಗ್ಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ ಎಂದು ಶೇಡೇಗಾಳಿ, ಮಂತುರ್ಗಾ ಹಾಗೂ ಹರೂರಿ ಗ್ರಾಮಸ್ಥರು ದೂರಿದ್ದಾರೆ.ತಾಲೂಕಿನ ಶೇಡೇಗಾಳಿ, ಹರೂರಿ, ರೂಮೇವಾಡಿ ಗ್ರಾಮಗಳ ಹೊರವಲಯದ ನದಿ ಮತ್ತು ಹಳ್ಳಕೊಳ್ಳಗಳ ಬಳಿ ಫಿಲ್ಟರ್ ಅಳವಡಿಸಿ ಮರಳು ಸಂಗ್ರಹಿಸಲಾಗುತ್ತಿದೆ. ರಾತ್ರಿ ಆಗುತ್ತಲೇ ಇಲ್ಲಿಂದ ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮರಳು ತುಂಬಿಸಿ ಸಾಗಿಸಲಾಗುತ್ತಿದೆ. ಮರಳು ದಂಧೆಕೋರರು ಇಕ್ಕಟ್ಟಾದ ರಸ್ತೆಯಲ್ಲಿ ಭಾರೀ ವಾಹನಗಳನ್ನು ಸಾಗಿಸಿ ಕಾಡಿನಲ್ಲಿ ಹಾದುಹೋದ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ. ಮರಳು ಸಾಗಾಟದ ವಾಹನಗಳ ಆರ್ಭಟದಿಂದ ನಮ್ಮ ಹೊಲಗಳಿಗೆ ಹೋಗುವ ರಸ್ತೆಗಳು ಹಾಳಾಗುತ್ತಿವೆ. ಶೇಡೇಗಾಳಿ, ಹರೂರಿ, ರುಮೇವಾಡಿ, ಹೊಣಕಲ್ ಹಾಗೂ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಮರಳು ದಂಧೆಗೆ ತಾಲೂಕಿನ ಕೆಲ ರಾಜಕಾರಣಿಗಳು, ಪೊಲೀಸ್, ಕಂದಾಯ ಮತ್ತು ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಇದರಿಂದಾಗಿ ನಮ್ಮೂರಿನ ವಾತಾವರಣ ಕಲುಷಿತಗೊಳ್ಳುತ್ತಿದೆ. ಕೃಷಿ ಭೂಮಿ ಬರಡಾಗುತ್ತಿದೆ. ಹಗಲು ಹೊತ್ತಿನಲ್ಲಿ ತಾಲ್ಲೂಕಿನ ನಿರ್ಜನ ಪ್ರದೇಶಗಳಲ್ಲಿ ಮರಳು ಶೇಖರಣೆ ಮತ್ತು ರಾತ್ರಿಯ ಹೊತ್ತು ಮರಳು ಸಾಗಾಣೆಕೆಯ ಕೆಲಸ ಸದ್ದಿಲ್ಲದೇ ನಡೆದಿದೆ. ಕತ್ತಲಾಗುತ್ತಿದ್ದಂತೆ ಟ್ರಾಕ್ಟರ್ ಹಾಗೂ ಲಾರಿಗಳಲ್ಲಿ ತುಂಬಿ ಸಾಗಿಸಲಾಗುತ್ತದೆ. ಪರಿಸರಕ್ಕೆ ಮತ್ತು ಜಲಮೂಲಗಳಿಗೆ ಮಾರಕವಾಗಿರುವ ಈ ಅಕ್ರಮವನ್ನು ಸಂಬಂಧಪಟ್ಟವರು ಪತ್ತೆ ಹಚ್ಚಿ ತಡೆಯಬೇಕು. ಈ ದಂಧೆಯ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ