ದಾಸೇಗೌಡ
ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದ ಅಮೃತ್ 2.0 ಯೋಜನೆಯ ಕಾಮಗಾರಿಗಳ ಬಗ್ಗೆ ಸರಗೂರು ಪಟ್ಟಣದ ವಿವಿಧ ವಾರ್ಡ್ಗಳ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೃತ್ 2.0 ಯೋಜನೆಗೆ ರೂ.16.43 ಕೋಟಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ರೂ.16.44 ಕೋಟಿ ಮೊತ್ತಕ್ಕೆ ಬೆಂಗಳೂರು ಮೂಲದ ಮೆ. ಸುಜಾಲ ಸ್ಟ್ರಕ್ಚರ್ಸ್ ಗುತ್ತಿಗೆ ಪಡೆದಿದೆ. 18 ತಿಂಗಳ ಕಾಮಗಾರಿ ಅವಧಿಯಲ್ಲಿ ವಿತರಣಾ ಕೊಳವೆ ಮಾರ್ಗ, ಮೇಲ್ಮಟ್ಟದ ಜಲಸಂಗ್ರಹಾಗಾರ, ಫೀಡರ್ ಮೇನ್, ಜಲಶುದ್ಧಿಕರಣ ಘಟಕದ ಮೇಲ್ದರ್ಜೆಗೇರಿಸುವಿಕೆ ಹಾಗೂ 2,960 ಗೃಹ ಸಂಪರ್ಕಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದುವರೆಗೆ ರೂ.13.32 ಕೋಟಿ ವೆಚ್ಚವಾಗಿದೆ ಎಂದು ಅಧಿಕಾರಿಗಳ ದಾಖಲೆಗಳಲ್ಲಿ ತಿಳಿಸಲಾಗಿದೆ.ಯೋಜನೆಯಡಿ ಸರಗೂರು ಪಟ್ಟಣದ 2 ರಿಂದ 6, 8 ಹಾಗೂ 11ನೇ ವಾರ್ಡ್ಗಳಲ್ಲಿ ಹೊಸ ಮೀಟರ್ಸಂಪರ್ಕಗಳನ್ನು ಅಳವಡಿಸಲಾಗಿದೆ. ಆದರೆ ಹಲವು ಬಡಾವಣೆಗಳಲ್ಲಿ ಹೊಸ ನಲ್ಲಿ ಸಂಪರ್ಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಕೆಲವೆಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಹೊಸ ಸಂಪರ್ಕ ಬೇಡ, ಹಳೆಯ ಸಂಪರ್ಕವೇ ಇರಲಿ’
ಸರಗೂರು ಪಪಂ ಮುಖ್ಯಾಧಿಕಾರಿ ಎಸ್.ಕೆ. ಸಂತೋಷ್ ಕುಮಾರ್ ಅವರನ್ನು ವಿಚಾರಿಸಿದಾಗ, “ಹೊಸ ನಲ್ಲಿ ಸಂಪರ್ಕದ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಹಲವು ವಾರ್ಡ್ಗಳಿಂದ ನೀರು ಸರಬರಾಜು ಹಾಗೂ ಸಂಪರ್ಕಕ್ಕೆ ಸಂಬಂಧಿಸಿದ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಿದ್ದ ಕೆಲವು ಮೀಟರ್ನಲ್ಲಿ ಸಂಪರ್ಕಗಳು ನಿರ್ವಹಣೆಯ ಕೊರತೆಯಿಂದ ತುಕ್ಕು ಹಿಡಿದು ಹಾಳಾಗಿರುವ ಉದಾಹರಣೆಗಳಿವೆ. ಹೀಗಾಗಿ ಸರಗೂರಿನಲ್ಲಿಯೂ ಹೊಸ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸ ನಲ್ಲಿ ಸಂಪರ್ಕ ಅಳವಡಿಸಿದರೂ ಸಮರ್ಪಕವಾಗಿ ನೀರು ಬರುತ್ತಿಲ್ಲ. ಹಳೆಯ ಸಂಪರ್ಕದಿಂದಲೇ ನಮಗೆ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು.
ರಸ್ತೆಗಳನ್ನು ಅಗೆದು ಪೈಪ್ಗಳನ್ನು ಹಾಕಲಾಗಿದೆ. ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ. ಕೋಟ್ಯಂತರ ರೂಪಾಯಿ ಖರ್ಚಾಗಿರುವ ಯೋಜನೆಯ ಪ್ರಯೋಜನ ಜನರಿಗೆ ಸಿಗಬೇಕು.
ಹೊಸ ನಲ್ಲಿಯಲ್ಲಿ ನೀರು ಬಹಳ ಕಡಿಮೆ ಬರುತ್ತಿದೆ. ನಮಗೆ ನೀರಿನ ಸಮಸ್ಯೆ ಬಗೆಹರಿಯಬೇಕು. ಇಲ್ಲದಿದ್ದರೆ ಹಳೆಯ ಸಂಪರ್ಕವನ್ನೇ ಮುಂದುವರಿಸಬೇಕು.
- ಮಂಗಳಮ್ಮ, 6ನೇ ವಾರ್ಡ್ ನಿವಾಸಿ.