- ನೂತನ ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕಾರ
ಮಲೇಬೆನ್ನೂರು: ಸರ್ಕಾರಿ ನೌಕರರಿಗೆ ಭಯವಿದ್ದರೆ ಮಾತ್ರ ಅವರ ಕರ್ತವ್ಯದಲ್ಲಿ ಯಶಸ್ಸು ಕಾಣಬಹುದು ಎಂದು ಉಪ ತಹಸೀಲ್ದಾರ್ ಆರ್.ರವಿ ಅಭಿಪ್ರಾಯಪಟ್ಟರು.
ಇಲ್ಲಿನ ನಾಡ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಹಿರಿಯೂರು ತಾಲೂಕು ಧರ್ಮಪುರಕ್ಕೆ ವರ್ಗಾವಣೆಯಾದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ಮಾಯಕೊಂಡ, ಗೋಪನಾಳ್, ರಾಮಗಿರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಆಹಾರ ಶಿರಸ್ತೇದಾರ್ ಆಗಿ ಒಟ್ಟು ೩೪ ವರ್ಷ ಸೇವೆ ಮಾಡಿದ್ದೇನೆ. ಸರ್ಕಾರ ವೇತನ ಕೊಡುತ್ತೆ, ನಿಯಮಾನುಸಾರ ನಾಗರೀಕರ ಸೇವೆ ಮಾಡಬೇಕು. ಅನಿವಾರ್ಯವಾದಲ್ಲಿ, ಅಗತ್ಯ ದಾಖಲೆಯಿದ್ದಲ್ಲಿ ಮಾನವೀಯತೆಯಲ್ಲಿಯೂ ಕರ್ತವ್ಯ ಮಾಡಬೇಕು ಎಂದರು.
ಗ್ರಾಮಾಡಳಿತ ಅಧಿಕಾರಿ ವಿಜಯ್ ಮಹಂತೇಶ್ ಮಾತನಾಡಿ, ರವಿಯವರ ಅವಧಿಯಲ್ಲಿ ನಾಡ ಕಚೇರಿಯಿಂದ ಅರ್ಧ ಗಂಟೆಯಲ್ಲಿ ಪೌತಿ ಖಾತೆ ಮತ್ತು ವಂಶವೃಕ್ಷ ನೀಡಿದ ದಾಖಲೆಯಿದೆ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ ಹೋರಾಟ ಮಾಡಿ ಕೆಲವರಿಗೆ ಬಡ್ತಿ ನೀಡಿದ್ದು, ನಾಡ ಕಚೇರಿಗೆ ಹೊಸ ಕಟ್ಟಡ ಮಂಜೂರು ಮಾಡಿಸಿದ್ದು ವಿಶೇಷವಾದ ಘಟನೆಗಳಾಗಿವೆ ಎಂದರು.
ಗ್ರಾಮಾಡಳಿತ ಅಧಿಕಾರಿ ಸೌಮ್ಯ, ಅಣ್ಣಪ್ಪ, ರೈತ ಮಂಜು, ಸುರೇಶ್, ಗಂಗಾಧರ್, ಪತ್ರಕರ್ತರಾದ ದೇವರಾಜ್, ಸದಾನಂದ, ರಮೇಶ್, ನಟರಾಜನ್, ಶಿವಕುಮಾರ್ ಮತ್ತಿತರರು ರವಿಯವರ ಕರ್ತವ್ಯವನ್ನು ಮೆಲುಕು ಹಾಕಿದರು. ನೂತನ ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು.
-ಚಿತ್ರ-೧: ಉಪ ತಹಸೀಲ್ದಾರ್ ಆಗಿ ಯೋಗೇಶ್ ಅಧಿಕಾರ ಸ್ವೀಕರಿಸಿದರು.