ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಿವಸ್ಮಾರಕ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆದಾರರ ಅಸಂಬದ್ಧ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಂದ್ ಹಿನ್ನೆಲೆಯಲ್ಲಿ ಇಡೀ ದಿನ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಬಂದ್‌ಗೆ ಸ್ಥಳೀಯ ವ್ಯಾಪಾರಸ್ಥರು, ವಾಣಿಜ್ಯ ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು, ಹೋಟೆಲ್ ಮಾಲೀಕರು, ದಿನಸಿ ವರ್ತಕರು ಸೇರಿದಂತೆ ಹಲವರು ಬೆಂಬಲಿಸಿದ್ದರು. ಶಾಲಾ ಕಾಲೇಜುಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿಗಳು ಮುಚ್ಚಿದ್ದವು.ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಮಾತನಾಡಿ, ಹೆದ್ದಾರಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಗುತ್ತಿಗೆದಾರರು ಅಲ್ಲಲ್ಲಿ ರಸ್ತೆ ಅಗೆದು ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ. ಮೀನು ಮಾರುಕಟ್ಟೆ ಬಳಿ ಸೇತುವೆ ನಿರ್ಮಾಣದ ಕಾಮಗಾರಿಗಾಗಿ ರಸ್ತೆ ಅಗೆದ ಕಾರಣ ನಾಲ್ಕು ತಿಂಗಳಿಂದ ಈ ಮಾರ್ಗದಲ್ಲಿ ಬಸ್ ಸೇರಿದಂತೆ ವಾಹನ ಸಂಚಾರ ಸ್ಥಗಿತವಾಗಿದೆ. ಪರಿಣಾಮ ಖಾನಾಪುರ ಪಟ್ಟಣಕ್ಕೆ ಬರುವವರು, ಇಲ್ಲಿಂದ ಹೋಗುವವರು ಅನಿವಾರ್ಯವಾಗಿ ಸುತ್ತಿ ಬಳಸಿ ಸಂಚರಿಸಬೇಕಿದೆ ಎಂದು ಕಿಡಿಕಾರಿದರು.
ಮೀನು ಮಾರುಕಟ್ಟೆ ಬಳಿ ಮುಖ್ಯ ರಸ್ತೆ ಕಾಮಗಾರಿಗೆ ಕಾನೂನು ಅಡಚಣೆ ಇದ್ದಲ್ಲಿ ಖಾನಾಪುರ ನಕಾಶೆಯಲ್ಲಿ ನಮೂದು ಇರುವ ನಾವಿ ರಸ್ತೆಯನ್ನು ನಿರ್ಮಿಸಿಕೊಡಬೇಕು. ಗೋವಾ ಕ್ರಾಸ್‌ನಿಂದ ಇದೇ ರಸ್ತೆ ಮೂಲಕ ಖಾನಾಪುರ ಬಸ್ ನಿಲ್ದಾಣದವರೆಗೆ ಮತ್ತು ಬಸ್ ನಿಲ್ದಾಣದಿಂದ ಗಾಂಧಿನಗರ, ಕೋರ್ಟ್ ಮಾರ್ಗವಾಗಿ ಬೆಳಗಾವಿ ಕಡೆಗೆ ಬಸ್ ಗಳು ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಈ ಮಾರ್ಗದಲ್ಲಿ ಒಂದೇ ವೇಳೆ ಎರಡು ಭಾರೀ ಗಾತ್ರದ ವಾಹನಗಳು ದಾಟುವಂತೆ ಅನುವು ಮಾಡಿಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮಾ.11ರಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ವಿವರಿಸಿ ತಹಸೀಲ್ದಾರ್ ಮೂಲಕ ವಿವಿಧ ಇಲಾಖೆಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಹಾಗೂ ಅಧಿಕಾರಿಗಳ ಜೊತೆ ಬಳಿಕ ಪ್ರತಿಭಟನಾಕಾರರು ಮೀನು ಮಾರುಕಟ್ಟೆ ಬಳಿಯ ಸ್ಥಗಿತಗೊಂಡಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಮಧ್ಯಾಹ್ನದ ಬಳಿಕ ಶಾಸಕ ವಿಠ್ಠಲ ಹಲಗೇಕರ ಅಧಿಕಾರಿಗಳ ಸಭೆ ನಡೆಸಿ ಈ ವಿಷಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು. ಶಾಸಕರು ಮತ್ತು ತಹಸೀಲ್ದಾರರಿಂದ ಕಾಮಗಾರಿಗೆ ಇರುವ ಅಡಚಣೆಗಳನ್ನು ದೂರಗೊಳಿಸುವ ಭರವಸೆ ಸಿಕ್ಕ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.