ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಂಜೆ 7ಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮ ವೇದಿಕೆಯಲ್ಲಿ ಹೂಲಿ ಹಿರೇಮಠದ ರಾಜಗುರು ಸಂಸ್ಥಾನದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ವಚನಾನಂದ ಸ್ವಾಮೀಜಿ ಸಾನ್ನಿಧ್ಯವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಶಿವರಾಜ ತಂಗಡಗಿ ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು. ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಸವಿತಾ ಪಾಟೀಲ ಅವರಿಗೆ ವೀರರಾಣಿ ಮಲ್ಲಮ್ಮ ಪ್ರಶಸ್ತಿ ಪ್ರಧಾನ ನಡೆಯಲಿದೆ.ಕಾರ್ಯಕ್ರಮಕ್ಕೆ ₹75 ಲಕ್ಷ: ಉತ್ಸವಕ್ಕೆಂದೇ ರಾಜ್ಯ ಸರ್ಕಾರ ₹75 ಲಕ್ಷ ಅನುದಾನ ನೀಡಿದ್ದು, ಎರಡು ದಿನಗಳ ಕಾಲ ಬೈಲಹೊಂಗಲ ತಾಲೂಕಿನ ಬೆಳವಡಿಯಲ್ಲಿ ಎರಡು ಎಕರೆ ಜಮೀನಿನಲ್ಲಿ ತೆರೆದ ಭವ್ಯವಾದ ಪೆಂಡಾಲ್ ನಿರ್ಮಾಣವಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ, ರಾಜ್ಯಮಟ್ಟದ ಮಹಿಳಾ, ಪುರುಷ ಜಂಗೀ ನಿಕಾಲಿ ಕುಸ್ತಿಗಳಿಗೆ ಕುಸ್ತಿ ಅಖಾಡ ಸಜ್ಜಾಗಿದೆ. 10 ವಸ್ತು ಪ್ರದರ್ಶನ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜನಮನರಂಜಿಸಲಿವೆ.
ಮಾ.1 ರಂದು ಬೆಳಗ್ಗೆ 11ಕ್ಕೆ ಮಲ್ಲಮ್ಮ ಸ್ಮಾರಕ ಭವನದಲ್ಲಿ ವಿಚಾರ ಸಂಕೀರ್ಣದಲ್ಲಿ ದೊಡವಾಡ ಜಡಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಡೀನ್ ಡಾ.ಡಿ.ಎ.ಉಪಾಧ್ಯ ಅಧ್ಯಕ್ಷತೆ ವಹಿಸುವರು. ಮುಜರಾಯಿ ಇಲಾಖೆ ನಿರ್ದೇಶಕ ಮಹಾಂತೇಶ ಶಾಸ್ತ್ರಿಗಳು ಉದ್ಘಾಟಿಸುವರು. ಸಮಾಜ ಸೇವಕ ಪ್ರಕಾಶ ಹುಂಬಿ ಆಶಯ ನುಡಿ ಮಂಡಿಸುವರು. ಉಪನ್ಯಾಸಕಿ ಶಿವಲೀಲಾ ಮುಕುಂದ ಮಹಿಳಾ ಸಬಲೀಕಣರಣದಲ್ಲಿ ರಾಣಿ ಮಲ್ಲಮ್ಮ ಪಾತ್ರ ಕುರಿತು ಉಪನ್ಯಾಸ, ಸಾಹಿತಿ ಪ್ರೊ.ರಾಮಣ್ಣ ತಟ್ಟಿ ರಾಣಿ ಮಲ್ಲಮ್ಮ ಪರಾಕ್ರಮ, ಸಾಹಸ ಕುರಿತು ಉಪನ್ಯಾಸ, ಸಾಹಿತಿ ನೇತ್ರಾವತಿ ಬಿಸರೊಳ್ಳಿ ರಾಣಿ ಮಲ್ಲಮ್ಮ ಜೀವನ ಮತ್ತು ಪ್ರಮುಖ ಘಟನೆ ಕುರಿತು ಉಪನ್ಯಾಸ ನೀಡುವರು.
ಸೈನ್ಯ ಕಟ್ಟಿದ್ದ ಮಲ್ಲಮ್ಮ: ಕಿತ್ತೂರ ಚನ್ನಮ್ಮನ ಕಾಲಕ್ಕಿಂತಲೂ ಪೂರ್ವದಲ್ಲಿ ಬೆಳವಡಿ ಮಲ್ಲಮ್ಮ ವೀರ ಯೋಧೆಯಾಗಿ ಮಹಿಳಾ ಸೈನ್ಯವನ್ನು ಕಟ್ಟಿದ್ದಳು. ಅಲ್ಲದೆ, ಮಹಿಳಾ ಸೈನ್ಯದೊಂದಿಗೆ ಶಿವಾಜಿ ಮಹಾರಾಜರೊಂದಿಗೆ ಧೈರ್ಯದಿಂದ ಹೋರಾಡಿದ್ದಳೆಂಬುವುದು ಇತಿಹಾಸ.
ಕ್ರಿ.ಶ 1678ರಲ್ಲಿ ಶಿವಾಜಿ ಮಹಾರಾಜ ಬೆಳವಡಿಯಲ್ಲಿ ಬೀಡು ಬಿಟ್ಟು ಅಲ್ಲಿಯ ಕೋಟೆಯನ್ನು ಸದೆಬಡೆಯಲು ಯತ್ನಿಸಿದಾಗ ಶಿವಾಜಿ ಸೈನ್ಯವನ್ನು ಸಮರ್ಥವಾಗಿ ಮಲ್ಲಮ್ಮ ಎದುರಿಸಿದ್ದಳು. ಹಿಂದಿನಿಂದ ಬಂದ ಶಿವಾಜಿ ಸೈನಿಕನು ಮಲ್ಲಮ್ಮನ ಕುದುರೆ ಕಾಲನ್ನು ಕತ್ತರಿಸಿದ್ದರಿಂದ ನಿರಾಯುಧಳಾಗಿದ್ದ ಮಲ್ಲಮ್ಮನನ್ನು ಬಂಧಿಸಿ ಶಿವಾಜಿ ಮಹಾರಾಜನ ಬಳಿ ತಂದಾಗ ಮಲ್ಲಮ್ಮ ಸ್ತ್ರೀಯಾಗಿ ಸೈನ್ಯ ಕಟ್ಟಿ ಹೋರಾಡಿದ್ದನು ಮೆಚ್ಚಿ ಬೆಳವಡಿಯನ್ನು ಬಿಟ್ಟುಕೊಟ್ಟನು ಎಂಬುದು ಇತಿಹಾಸದಿಂದ ಕಾಣುತ್ತೇವೆ. ಮಲ್ಲಮ್ಮಳನ್ನು ಸಹೋದರಿಯನ್ನಾಗಿ ಸ್ವೀಕರಿಸಿದ ಶಿವಾಜಿಯ ನಿರ್ಧಾರದಿಂದ ಅಂದು ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯಕ್ಕೆ ಕೊಂಡಿಯಾಯಿತು.