ಹಳಿಯಾಳ: ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಬಡವರು ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೊಳಿಸಬೇಕೆಂದು ಸಿಐಟಿಯು ಆಗ್ರಹಿಸಿದೆ.
ಬುಧವಾರ ರಾಷ್ಟ್ರವ್ಯಾಪಿ ಬೇಡಿಕೆಗಳ ದಿನದ ಅಂಗವಾಗಿ ಹಳಿಯಾಳದಲ್ಲಿ ಸಿಐಟಿಯು ವತಿಯಿಂದ ಅಂಗನವಾಡಿ ಹಾಗೂ ವಿವಿಧ ಇಲಾಖೆಗಳ ಮತ್ತು ಸಂಘಟನೆಗಳ ಕಾರ್ಮಿಕರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.ತಾಲೂಕಾಡಳಿತ ಸೌಧಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್- 2 ತಹಸೀಲ್ದಾರ್ ಜಿ.ಕೆ. ರತ್ನಾಕರ ಅವರಿಗೆ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಎಪಿಎಂಸಿ ವ್ಯವಸ್ಥೆಯನ್ನು ಬಲಪಡಿಸಬೇಕು. ಗೊಬ್ಬರ ಒಳಗೊಂಡಂತೆ ಕೃಷಿ ಹಿಡುವಳಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು. ರೈಲ್ವೆ, ವಿದ್ಯುತ್ ಒಳಗೊಂಡ ಎಲ್ಲ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣವನ್ನು ಕೈಬಿಡಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು ಸೇರಿದಂತೆ ಇನ್ನಿತರ ಹಲವಾರು ಬೇಡಿಕೆಗಳನ್ನು ಸಲ್ಲಿಸಲಾಗಿದೆ.ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಶಾಂತಾರಾಮ ನಾಯ್ಕ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಠಕ್ಕಪ್ಪ ಗುರಬಣ್ಣನವರ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಶೋಭಾ ಕುರಟ್ಟಿ, ರೈತ ಸಂಘದ ಸಹದೇವ ತೆಗ್ನೋಳಕರ, ಕಟ್ಟಡ ಕಾರ್ಮಿಕರ ಸಂಘದ ಹನುಮಂತ ಸಿಂದೋಗಿ, ಅಂಗನವಾಡಿ ನೌಕರರ ಸಂಘದ ಸುಷ್ಮಾ ಶಿಂಧೆ, ಸುಜಾತಾ ವಾಲೇಕರ, ಜ್ಯೋತಿ ತಾಂಬಿಟಕರ, ಬ್ರಿಜಿಟಾ ಬೃಗಾಂಜಾ ಹಾಗೂ ಇತರರು ಇದ್ದರು.