ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ನಿಯಮ ಜಾರಿ ವಿರೋಧಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Apr 02, 2026, 02:30 AM IST
ಫೋಟೋವಿವರ- (1ಎಚ್‌ಪಿಟಿ4)  ಹೊಸಪೇಟೆ ನಗರದಲ್ಲಿ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಏಪ್ರಿಲ್ 1 ರಿಂದ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ನಿಯಮಗಳನ್ನು ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

2026ರ ಫೆಬ್ರವರಿ 12 ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ.

ಹೊಸಪೇಟೆ: ಏಪ್ರಿಲ್ 1 ರಿಂದ 4 ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ಸರ್ಕಾರ ನಿಯಮಗಳನ್ನು ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಇಲ್ಲಿನ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಬುಧವಾರ ಕಾರ್ಮಿಕ ಕರಾಳ ದಿನಾಚರಣೆಯಾಗಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ಧ ಏಪ್ರಿಲ್ 1ರಿಂದ ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಅಖಿಲ ಭಾರತ ಪೆಢರೇಷನ್‌ಗಳ ಜಂಟಿ ವೇದಿಕೆಯು ಕರೆ ನೀಡಿದ್ದು, ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ವ್ಯವಹಾರವನ್ನು ಸುಲಭಿಕರಿಸಲು ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಅವರು ಒತ್ತಾಯಿಸಿದರು.

ರಾಜ್ಯ ಕಾರ್ಯದರ್ಶಿ ಎಲ್‌.ಮಂಜುನಾಥ ಮಾತನಾಡಿ, 2026ರ ಫೆಬ್ರವರಿ 12 ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ. ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನೂ ಕರೆದಿಲ್ಲ. ಇದು ಭಾರತವು ಬದ್ಧವಾಗಿರುವ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಸಿಐಟಿಯು ಮುಖಂಡ ಆರ್‌.ಭಾಸ್ಕರ್‌ ರೆಡ್ಡಿ ಮಾತನಾಡಿ, ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ಬ್ರಿಟಿಷ್ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳಿಗೆ ತಳ್ಳಲಿವೆ. ಸ್ವಾತಂತ್ರ‍್ಯಪೂರ್ವ ಮತ್ತು ಸ್ವಾತಂತ್ರ‍್ಯೋತ್ತರ ಕಾಲಗಳಲ್ಲಿ ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು, ತ್ರಿಪಕ್ಷೀಯ ಮಾತುಕತೆ, ಮುಷ್ಕರ ಹಕ್ಕು, ಸಮರ್ಪಕ ವೇತನ, ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬೋನಸ್, ಗ್ರ‍್ಯಾಚ್ಯುಟಿ ಮತ್ತು ಪಿಂಚಣಿ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಸಿಐಟಿಯುನ ಜಿಲ್ಲಾ ಸಂಚಾಲಕ ಕೆ.ಎಂ. ಸ್ವಲ್ನ, ಸ್ಥಳೀಯ ಮುಖಂಡರಾದ ಎಂ. ಗೋಪಾಲ್, ಕೆ.ಎಂ. ಸಂತೋಷ, ಎನ್. ಯಲ್ಲಾಲಿಂಗ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೋಲ್ ಶುಲ್ಕ ಏರಿಕೆ: ಸಾರ್ವಜನಿಕರ ತೀವ್ರ ವಿರೋಧ
ಸ್ಥಳೀಯರ ಸಹಕಾರದಿಂದ ನಯಂಪಳ್ಳಿಯ 50 ಮನೆಗಳಿಗೆ ನೀರು ಸಂಪರ್ಕ