ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Feb 29, 2024, 02:08 AM IST
6 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನು ಹಿಂದಕ್ಕೆ ಪಡೆಯಬೇಕು, ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲಬೆಲೆ ನೀಡಬೇಕು, ದೇಶದ ಐಕ್ಯತೆಯನ್ನು ಒಡೆಯುವ ಸೌಹಾರ್ಧತೆಯನ್ನು ಹಾಳು ಮಾಡುವ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮ ನಿರಪೇಕ್ಷ ಮೌಲ್ಯ ರಕ್ಷಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಬೆಲೆ ಏರಿಕೆ ನಿಯಂತ್ರಿಸಬೇಕು, ಬಡವರ ಬದುಕನ್ನು ಉತ್ತಮಪಡಿಸುವ ನೀತಿಗಳು ಜಾರಿಯಾಗಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ [ಸಿಐಟಿಯು] ಪದಾಧಿಕಾರಿಗಳು, ನಗರದ ಅಶೋಕ ರಸ್ತೆಯ ಕೇಂದ್ರ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ರೈತ ವಿರೋಧಿ ಕೃಷಿ ಕಾನೂನು ಹಿಂದಕ್ಕೆ ಪಡೆಯಬೇಕು, ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲಬೆಲೆ ನೀಡಬೇಕು, ದೇಶದ ಐಕ್ಯತೆಯನ್ನು ಒಡೆಯುವ ಸೌಹಾರ್ಧತೆಯನ್ನು ಹಾಳು ಮಾಡುವ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನದ ಧರ್ಮ ನಿರಪೇಕ್ಷ ಮೌಲ್ಯ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

ರೈಲ್ವೇ, ವಿದ್ಯುತ್. ಹಣಕಾಸು ವಲಯವನ್ನು ಖಾಸಗೀಕರಿಸುವ ನೀತಿ ಕೈಬಿಡಬೇಕು, ಸಾರ್ವಜನಿಕ ರಂಗದ ಕೈಗಾರಿಕೆ ಮತ್ತು ಸೇವೆ ಬಲಪಡಿಸಬೇಕು, ಅರೆಕುಶಲ ಕಾರ್ಮಿಕರಿಗೆ ಕನಿಷ್ಠ ವೇತನ 31 ಸಾವಿರ ಜಾರಿಗೊಳಿಸಬೇಕು, ದಿನಕ್ಕೆ ನಾಲ್ಕು ಪಾಳಿಯ ಕೆಲಸ ಪ್ರಾರಂಭಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಗುತ್ತಿಗೆ, ಹೊರಗುತ್ತಿಗೆ ಹಾಗೂ ಹಂಗಾಮಿ ಕಾರ್ಮಿಕರ ಮೇಲಿನ ದಬ್ಬಾಳಿಕೆ ನಿಲ್ಲಬೇಕು, ಇಎಸ್ಐ, ಇಪಿಎಫ್, ಬೋನಸ್, ಗ್ರ್ಯಾಚ್ಯುಟಿ ಮೇಲಿನ ಎಲ್ಲಾ ಮಿತಿ ತೆಗೆದುಯಬೇಕು, ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವ ಕಾನೂನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇಪಿಎಫ್ ನಿವೃತ್ತಿದಾರರಿಗೆ ಕನಿಷ್ಠ ಪಿಂಚಣಿ 1000 ಆಗಬೇಕು ಮತ್ತು ತುಟ್ಟಿಭತ್ಯೆ ನೀಡಬೇಕು, ಗ್ರಾಪಂ ನೌಕರರಿಗೆ ಸಿಗಬೇಕಿದ್ದ ಕಾನೂನು ಬದ್ಧ ಸೌಲಭ್ಯ ಜಾರಿಗೊಳಿಸಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ರೂಪಿಸಬೇಕು, ಕೇಂದ್ರ ಸರ್ಕಾರದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು 1996 ಹಾಗೂ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಸೆಸ್ಕಾನೂನು 1996 ಉಳಿಸಬೇಕು, ಸ್ಕೀಂ ಯೋಜನೆಯಲ್ಲಿ ಕೆಲಸ ಮಾಡುವ ಅಂಗನವಾಡಿ, ಬಿಸಿಯೂಟ, ಆಶಾ ಇತರೆ ಸ್ಕೀಂ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಕನಿಷ್ಠ ವೇತನ, ಸೇವೆ ಹಾಗೂ ನಿವೃತ್ತಿ ಸೌಲಭ್ಯ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಂ, ಕಾರ್ಯಾಧ್ಯಕ್ಷ ಎಚ್.ಎಸ್. ಜಗದೀಶ, ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿರಾವ್, ಖಜಾಂಚಿ ಎಂ. ಅಣ್ಣಪ್ಪ ಮೊದಲಾದವರು ಇದ್ದರು.

PREV

Recommended Stories

ಧರ್ಮಸ್ಥಳ ವಿರೋಧಿ ವೀಡಿಯೋಗೆ ಹಣದ ವ್ಯವಹಾರದ ಶಂಕೆ: ಎನ್‌ಐಎ ತನಿಖೆಗೆ ಬಿಜೆಪಿ ಒತ್ತಾಯ
ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ