ರಾಯಚೂರು/ಮಾನ್ವಿ: ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆಯ ನಂತರ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ವಿರೋಧಿಸಿ ಹಾಗೂ ಮಾಧ್ಯಮದವರ ಮೇಲೆ ನಾಸೀರ್ ಹುಸೇನ್ ದರ್ಪ ತೋರಿರುವುದನ್ನು ಖಂಡಿಸಿ ರಾಯಚೂರು ನಗರ ಮತ್ತು ಮಾನ್ವಿ ಪಟ್ಟಣದಲ್ಲಿ ಬುಧವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ, ಕೂಡಲೇ ಸರ್ಕಾರ ತಪ್ಪಿಸ್ಥರನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಈ ವಿಷಯ ಅತ್ಯಂತ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ, ರಾಜ್ಯದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತವೆ ಸರ್ಕಾರ ಕೂಡಲೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಪಾದಿಸಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯ ಮೇಲೆ ದೇಶದ್ರೋಹದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಈ ಪ್ರಕರಣದ ಸೂಕ್ತ ತನಿಖೆ ನಡೆದು ತೀರ್ಪು ಪ್ರಕಟವಾಗುವ ತನಕ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ನೀಡಬಾರದು ಎಂದು ಅಗ್ರಹಿಸುತ್ತೇವೆ. ಸರ್ಕಾರ ಕೂಡಲೇ ತಪ್ಪಿತಸ್ಥ ರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ರಾಯಚೂರಿನ ಹೋರಾಟದಲ್ಲಿ ಎಬಿವಿಪಿಯ ನಗರ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ, ಕಾರ್ಯಕರ್ತರಾದ ವರಪ್ರಸಾದ್, ಶಾಂತಕುಮಾರ, ತೇಜಸ್ವೀನಿ, ಕಾವೇರಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾನ್ವಿ ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಟಿ ಮೋರ್ಚ್ ಕಾರ್ಯದರ್ಶಿ ಅಯ್ಯಪ್ಪ ನಾಯಕ ಮ್ಯಾಕಲ್, ವಿಶ್ವಹಿಂದೂ ಪರಷತ್‌ನ ವಿಜಯಕುಮಾರ ಇಬ್ರಾಂಪುರ, ಮುಖಂಡರಾದ ಜೆ.ಸುಧಾಕರ್, ಆಂಜನೇಯ್ಯ ನಾಯಕ, ಬಸವರಾಜ ನಾಯಕ, ಶ್ರೀಕಾಂತ್ ಗೂಳಿ, ಹನುಮೇಶ ನಾಯಕ, ವೆಂಕಿಯಾದವ್, ಶಿವು ಚಾಲ್ಮಲ್, ನಾಗರಾಜ, ಮಲ್ಲಿಕಾರ್ಜುನ ಸ್ವಾಮಿ, ಸುರೇಶ ನಾಡಗೌಡ, ಮೃತ್ಯುಜಯ ಶೆಟ್ಟಿ, ಕಬ್ಬೀರ್, ಎಂ.ಶರಣಬಸವ, ಕುಮಾರಸ್ವಾಮಿ ಮೇಧಾ, ಎಂ.ಶ್ರೀನಿವಾಸ, ನಾಗರಾಜ ಶೆಟ್ಟಿ ಮತ್ತಿತರರು ಇದ್ದರು.