ಮಾಸಿಕ ಕನಿಷ್ಠ ₹36 ಸಾವಿರ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ತಿದ್ದುಪಡಿಗೆ ಒತ್ತಾಯಕನ್ನಡಪ್ರಭ ವಾರ್ತೆ ಕಾರವಾರ
ನಗರದ ಮಿತ್ರ ಸಮಾಜದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು. ಈ ವೇಳೆ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಾಡಿನ ಎಲ್ಲಾ ಕಾರ್ಮಿಕರಿಗೂ ವೈಜ್ಞಾನಿಕ ಆಧಾರದ ಮೇಲೆ ಕನಿಷ್ಠ ವೇತನವನ್ನು ನಿಗದಿಪಡಿಸಿ ಶೀಘ್ರವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತದೆ. ಆದರೆ, ಈ ಅಧಿಸೂಚನೆಯು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳಿಗೆ ಪೂರಕವಾಗಿಲ್ಲ. ಪ್ರಸ್ತುತ ಗಗನಕ್ಕೇರಿರುವ ಬೆಲೆ ಏರಿಕೆ ಹಾಗೂ ಜೀವನ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಮಾಸಿಕ ಕನಿಷ್ಠ 36 ಸಾವಿರ ರೂ. ವೇತನ ನಿಗದಿಪಡಿಸಬೇಕು. ಅಲ್ಲದೇ, ಇದನ್ನು 2025ರ ಏಪ್ರಿಲ್ 11ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರಬೇಕು " ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿದಂತೆ ಪ್ರಮುಖ 19 ಉದ್ದಿಮೆಗಳಿಗೂ ಈ ವೇತನ ಹೆಚ್ಚಳವನ್ನು ವಿಸ್ತರಿಸಬೇಕು. ಈ ವಲಯಗಳಲ್ಲಿ ಅತಿ ಹೆಚ್ಚು ಮಹಿಳಾ ಕಾರ್ಮಿಕರು ದುಡಿಯುತ್ತಿದ್ದು, ವೇತನ ಹೆಚ್ಚಳದಿಂದ ಅವರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನವಾಗಲಿದೆ ಹಾಗೂ ಅವರ ಜೀವನಮಟ್ಟ ಸುಧಾರಿಸಲಿದೆ ಎಂದು ಮುಖಂಡರು ವಿವರಿಸಿದರು.
ಪ್ರತಿಭಟನೆಯ ಬಳಿಕ, ಸಿಐಟಿಯು ಮುಖಂಡರು ಹಾಗೂ ನೂರಾರು ಕಾರ್ಮಿಕರು ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.