ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Mar 04, 2026, 01:15 AM IST
1 | Kannada Prabha

ಸಾರಾಂಶ

ದೇಶದ ಸಂವಿಧಾನ ಖಾತರಿಪಡಿಸಿರುವ ಒಕ್ಕೂಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರ ನುಂಗುವ ಕೇಂದ್ರ ಸರ್ಕಾರ ನಡೆ ಖಂಡನಿಯ. ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಿಯಮಗಳನ್ನು ಬದಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯವರು ನಗರದ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ದೇಶದ ಸಂವಿಧಾನ ಖಾತರಿಪಡಿಸಿರುವ ಒಕ್ಕೂಟ ಪದ್ಧತಿಯಲ್ಲಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರ ನುಂಗುವ ಕೇಂದ್ರ ಸರ್ಕಾರ ನಡೆ ಖಂಡನಿಯ. ಕಾರ್ಮಿಕರ ಕುರಿತ ವಿಚಾರಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಿಯಮಗಳನ್ನು ಬದಲಿಸಬೇಕು. 4 ಕಾರ್ಮಿಕ ಸಂಹಿತೆಗಳಲ್ಲಿ ಕಾರ್ಮಿಕರಿಗೆ ಮಾರಕವಾಗಿರುವ ಅಂಶಗಳನ್ನು ತಿದ್ದುಪಡಿ ಮೂಲಕ ಬದಲಿಸಬೇಕು. ಸಂಹಿತೆಗಳ ಜಾರಿಗೆ ಅಗತ್ಯ ನಿಯಮಾವಳಿ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಸಂಹಿತೆ ಮತ್ತು ಕರಡು ನಿಯಮಾವಳಿ ಪ್ರಕಟಿಸಿದೆ. ದೇಶದ ಕಾರ್ಮಿಕರಿಗೆ ಈ ಕಾನೂನು ಮತ್ತು ನಿಯಮಾವಳಿಗಳನ್ನು ಅವರವರ ಮಾತೃಭಾಷೆಯಲ್ಲಿ ತಿಳಿದುಕೊಳ್ಳುವ ಹಕ್ಕಿದೆ. ಇದನ್ನು ನಿರಾಕರಿಸಬಾರದು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರ ಕನ್ನಡದಲ್ಲಿ ಪ್ರಕಟಿಸಬೇಕು. ನಿಯಮಾವಳಿ ಮತ್ತು ಕಾನೂನುಗಳನ್ನು ಓದಲು ರಾಜ್ಯದ ಕಾರ್ಮಿಕರಿಗೆ ಮುಕ್ತ ಅವಕಾಶ ಇರಬೇಕು. ಈ ಬಗ್ಗೆ ಕರ್ನಾಟಕ ಸರ್ಕಾರ ತನ್ನ ಬದ್ಧತೆ ಪ್ರಕಟಿಸಬೇಕು. ಕನ್ನಡದಲ್ಲಿ ಸಂಹಿತೆ ಮತ್ತು ನಿಯಮಾವಾಳಿಗಳನ್ನು ಪ್ರಕಟಿಸಿದ ನಂತರ ಆಕ್ಷೇಪಣೆ ಸಲ್ಲಿಸಲು ಕನಿಷ್ಠ 2 ತಿಂಗಳು ಅವಕಾಶ ನೀಡಬೇಕು. ರಾಜ್ಯ ಸರ್ಕಾರ ತನ್ನ ಅಧಿಕಾರ ಚಲಾಯಿಸಿ ಮೂಲ ಸಂಹಿತೆಗಳಿಗೆ ತಿದ್ದುಪಡಿ ತಂದು ನಂತರ ನಿಯಮಾವಳಿ ರೂಪಿಸಬೇಕು. ಜೊತೆಗೆ ಕೂಡಲೇ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಈಗಾಗಲೇ ಪ್ರಕಟಿಸಿರುವ ಕಾರ್ಮಿಕ ಸಂಹಿತೆಗಳಿಗೆ, ಕರಡು ನಿಯಮಗಳಿಗೆ ಸಿಐಟಿಯು ಹಾಗೂ ಅದರ ಸಂಯೋಜಿತ ಸಂಘಟನೆಗಳು ಆಕ್ಷೇಪಣೆಗಳನ್ನು ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿರಾವ್, ಮುಖಂಡರಾದ ಅಣ್ಣಪ್ಪ, ಪುಷ್ಪಲತಾ, ಜಯರಾಂ, ಬಸವಯ್ಯ, ರೇವಣ್ಣಸಿದ್ದಪ್ಪ, ಶಶಿಕುಮಾರ್, ಕಮಲಾಕ್ಷಿ, ಲೀಲಾವತಿ, ಚಂದ್ರಿಕಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರೀಕ್ಷೆಗಳೇನು?
ನುಡಿದಂತೆ ನಡೆದು ಅಭಿವೃದ್ಧಿಯತ್ತ ರಾಮನಗರ