ಕನ್ನಡಪ್ರಭ ವಾರ್ತೆ ತುಮಕೂರು
ಕುಶಲವಲ್ಲದ ಕಾರ್ಮಿಕರಿಗೆ ಕನಿಷ್ಠ ಮಾಸಿಕ 35 ಸಾವಿರ ರು. ವೇತನ ನೀಡಬೇಕು, ಕನಿಷ್ಠ ವೇತನ ನಿಗಧಿ ಕಾಯ್ದೆ ಕಲಂ 5(1) ಎ ಅನ್ವಯ ಬಿಡಿ ಕಾರ್ಮಿಕರಿಗೆ ವೇತನ ಕಡಿತ ಆದೇಶ ಹಿಂಪಡೆಯಬೇಕು, ತುಟ್ಟಿಭತ್ಯೆ ಅಂಶವನ್ನು ದಿನಕ್ಕೆ 6 ಪೈಸೆಗೆ ಹೆಚ್ಚಳ ಮಾಡಬೇಕು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 28 ರಂದು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2.50 ಕೋಟಿ ಅಕುಶಲ ಕಾರ್ಮಿಕರು ವಿವಿಧ ರಂಗಗಳಲ್ಲಿ ದುಡಿಯುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನದ ಬಗ್ಗೆ ಸರಿಯಾದ ಮಾನದಂಡ ಇಲ್ಲ, ಅಲ್ಲದೆ 2018ರಲ್ಲಿ ಸರ್ಕಾರವೇ ಜಾರಿಗೆ ತಂದ ಕನಿಷ್ಠ ವೇತನ ಕಾಯ್ದೆ ಜಾರಿ ಮಾಡಲು ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರ ವಿರುದ್ಧ ಇಡೀ ರಾಜ್ಯಾದ್ಯಂತ ಜುಲೈ 28 ರಂದು ಜಿಲ್ಲಾ ಕಾರ್ಮಿಕ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದರು.
ಬಿಡಿ ಕಾರ್ಮಿಕರಿಗೆ 2018ರಲ್ಲಿ ತ್ರಿಪಕ್ಷ್ಕೀಯ ಒಪ್ಪಂದ ಮೂಲಕ ಅನುಷ್ಠಾನಗೊಂಡ ಕನಿಷ್ಠ ವೇತನ ಕಾಯ್ದೆಯ ವಿರುದ್ದ ಅವಕಾಶವಿಲ್ಲದಿದ್ದರೂ ನ್ಯಾಯಾಲಯದ ಮೊರೆ ಹೋಗಿ, ಕನಿಷ್ಠ ವೇತನ ಕಾಯ್ದೆ 1948ರ ಕಲಂ 5(1) ಬಿ ಬದಲಾಗಿ, 5(1) ಬಿ ಜಾರಿಗೆ ಪೂರ್ವಾನುಮತಿ ನೀಡಿರುವುದು, ಕಾರ್ಮಿಕರ ವಿಚಾರದಲ್ಲಿ ನ್ಯಾಯಾಲಯಗಳ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಸರ್ಕಾರದ ಈ ನೀತಿಯಿಂದಾಗಿ ಸುಮಾರು 8.50 ಲಕ್ಷ ಬಿಡಿ ಕಾರ್ಮಿಕರಿಗೆ ಹೆಚ್ಚಳವಾಗಬೇಕಿದ್ದ ವೇತನ ಕುಸಿದಿದೆ ಎಂದರು.ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಕಮಲಾ ಮಾತನಾಡಿ, ಜುಲೈ 28 ರಂದು ನಡೆಯುವ ಪ್ರತಿಭಟನೆಯಲ್ಲಿ ಅಂಗನವಾಡಿ, ಆಶಾ, ಬಿಸಿಯೂಟ ಸೇರಿ ವಿವಿಧ ಸ್ಕೀಂ ನೌಕರರು, ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯುನ ಎನ್.ಕೆ.ಸುಬ್ರಹ್ಮಣ್ಯ, ಬಿ.ಉಮೇಶ್, ಗ್ರಾಪಂ ನೌಕರರ ಸಂಘದ ನಾಗೇಶ್, ಬಿಸಿಯೂಟ ನೌಕರರ ಸಂಘದ ನಾಗರತ್ನ, ಸ್ವಚ್ಛವಾಹಿನಿ ನೌಕರರ ಸಂಘದ ಸುಜಾತ, ಕಟ್ಟಡ ಕಾರ್ಮಿಕರ ಸಂಘದ ಮಧು ಮತ್ತಿತರರು ಪಾಲ್ಗೊಂಡಿದ್ದರು.