ನಾಳೆ ನಗರ ಸ್ವಚ್ಛತೆ ಅಭಿಯಾನಕ್ಕೆ ಚಾಲನೆ: ಸುರೇಶ್

KannadaprabhaNewsNetwork | Published : Mar 21, 2025 12:34 AM

ಸಾರಾಂಶ

ಚಾಮರಾಜನಗರದ ನಗರಸಭಾ ಕಚೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ವರ್ತಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರವಾಗಿರುವ ಚಾ.ನಗರವನ್ನು ಸ್ವಚ್ಛ ನಗರವನ್ನಾಗಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾ.೨೨ ರ ಶನಿವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವರ್ತಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಿನ ಸಹಕಾರ ನೀಡಬೇಕು ಎಂದು ನಗರಸಭಾ ಅಧ್ಯಕ್ಷ ಸುರೇಶ್ ಮನವಿ ಮಾಡಿದರು.

ನಗರಸಭಾ ಕಚೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ವರ್ತಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆ ನಡೆಯಿತು. ಇದೇ ೨೨ರ ಶನಿವಾರ ಬೆಳಗ್ಗೆ ೬.೩೦ಕ್ಕೆ ನಗರದ ಸಂತೇಮರಹಳ್ಳಿ ವೃತ್ತದಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಹಾಗೂ ವರ್ತಕರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟರು, ಸಂಸದ ಸುನೀಲ್ ಬೋಸ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಕವಿತಾ, ಜಿಪಂ ಸಿಇಒ ಮೋನಾ ರೋತ್ ಹಾಗೂ ನಗರಸಭೆ ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ನಮ್ಮ ಎಲ್ಲಾ ನಗರಸಭೆ ಸದಸ್ಯರು, ವಿವಿದ ಸಂಘ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸುರೇಶ್ ಮಾಹಿತಿ ನೀಡಿದರು.

ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಸ್ವಚ್ಚತೆ ಮತ್ತು ಕಸ ವಿಂಗಡಣೆ, ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಸಂಗ್ರಹವಾಗುವ ಕಸಗಳನ್ನು ವಿಂಗಡಣೆ ಮಾಡಿ ಪೌರಕಾರ್ಮಿಕರು ಬಂದಾಗ ಅದನ್ನು ಆಟೋಗಳಿಗೆ ಹಾಕುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ೩೧ ವಾರ್ಡುಗಳಲ್ಲಿ ಮಾಡಲಾಗುತ್ತದೆ ಎಂದರು. ಮೊದಲ ಹಂತದಲ್ಲಿ ಮಾ.೨೨ ರಂದು ಸಂತೇಮರಹಳ್ಳಿ ವೃತ್ತದಿಂದ ಆರಂಭಗೊಂಡು ದೊಡ್ಡಂಗಡಿ ಬೀದಿ, ಮಹಾವೀರ ಸರ್ಕಲ್, ಸುಲ್ತಾನ್ ಷರೀಪ್ ಸರ್ಕಲ್ ವರೆಗೆ ಬೆಳಗ್ಗೆ ೬.೩೦ ರಿಂದ ೮ ಗಂಟೆಯವರೆಗೆ ಪೌರ ಕಾರ್ಮಿಕರ ಜೊತೆಗೂಡಿ ಕಸ ಸಂಗ್ರಹಿಸುವ ಜೊತೆಗೆ ಅಭಿಯಾನವನ್ನು ವರ್ತಕರ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಾಗುತ್ತದೆ. ಅಲ್ಲದೇ ವರ್ತಕರು ಮತ್ತು ಬೀದಿ ಬದಿ ವ್ಯಾಪಾರಿಗಳು ಕಸವನ್ನು ಎಲ್ಲೆಂದರಲ್ಲಿ ಬೀಸಾಕದೆ, ಕಸದ ವಾಹನಗಳಿಗೆ ಕಡ್ಡಾಯವಾಗಿ ಹಾಕಬೇಕು. ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮಾರಾಗಳನ್ನು ಅಳವಡಿಸಿ, ಕಸ ಎಸೆಯುವವರ ವಿರುದ್ದ ನಿರ್ದಾಕ್ಷಣ್ಯ ಕ್ರಮ ವಹಿಸಲಾಗುತ್ತದೆ. ಈ ಮೂಲಕ ನಗರವನ್ನು ಸುಂದರ ವನ್ನಾಗಿಸಲು ಎಲ್ಲರು ಸಹಕಾರ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ಶಂಕರ್, ಕೈಗಾರಿಕೋದ್ಯಮಿ ವಿ. ಪ್ರಭಾಕರ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ಯ ಚಂದ್ ಸಿರವಿ, ಮಾಜಿ ಅಧ್ಯಕ್ಷ ಡಿ.ಪಿ. ವಿಶ್ವಾಸ್, ನಿಯೋಜಿತ ಸಹಾಯಕಗೌರ್‍ನರ್ ದೊಡ್ಡರಾಯಪೇಟೆ, ರೋಟರಿ ಅಧ್ಯಕ್ಷ ನಾಗರಾಜು, ಚಿನ್ನಬೆಳ್ಳಿ ವರ್ತಕರ ಸಂಘದ ಲಯನ್ ಚೇತನ್, ಇನ್ನರ್‌ವೀಲ್ ಅಧ್ಯಕ್ಷೆ ಪೂಜಾ ಸುಭಾಷ್, ತಮಿಳು ಸಂಘದ ರಂಗನಾಥ್ ಅವರು ನಗರ ಸ್ವಚ್ಛತೆಯ ಬಗ್ಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಅಭಿಯಾನಕ್ಕೆ ಹೆಚ್ಚಿನ ಸಹಕಾರ ನೀಡಿ ಯಶಸ್ವಿಗೊಳಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಪೌರಾಯುಕ್ತ ಎಸ್.ವಿ. ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜು, ಸುಷ್ಮಾ, ಪುಷ್ಪಾ, ಸಂತೋಷ್ ಮೊದಲಾದವರು ಇದ್ದರು.

Share this article